ದಕ-ಉಡುಪಿ ಜಿಲ್ಲಾ ಗಡಿ ಭಾಗದಲ್ಲಿ ಅತಂಕ

ಪಡುಬಿದ್ರಿ: ದುಬಾಯಿಯಿಂದ ಕರಾವಳಿಗೆ ವಿಮಾನ ಮೂಲಕ ಬಂದ ತುಳುವರಲ್ಲಿ ಹಲವರಿಗೆ ಕೊರೊನಾ ಸೋಂಕು ತಗಲಿರುವುದು ಶುಕ್ರವಾರ ದೃಢಪಟ್ಟ ಹಿನ್ನೆಲೆಯಲ್ಲಿ ದಕ-ಉಡುಪಿ ಜಿಲ್ಲಾ ಗಡಿ ಭಾಗ ಹೆಜಮಾಡಿ ಚೆಕ್‍ಪೋಸ್ಟ್‍ನಲ್ಲಿ ಆತಂಕ ಉಂಟುಮಾಡಿದೆ.

ದುಬಾಯಿಯಿಂದ ಬಂದಿರುವವರು ಉಡುಪಿಗೆ ಇದೇ ಚೆಕ್‍ಪೋಸ್ಟ್ ಮೂಲಕ ತೆರಳಿದ್ದು ಅವರನ್ನು ಹೊತ್ತೊಯ್ದ ವಾಹನವನ್ನು ಮಾತ್ರ ನೊಂದಾಯಿಸಿ ಕಳುಹಿಸಲಾಗಿದೆ. ಅಂದು ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿ, ಸಿಬಂದಿಗಳಿಗೂ ಆತ್ಮವಿಶ್ವಾಸ ತುಂಬುವ ಕಾರ್ಯವಾಗಬೇಕಿದೆ. ಅಲ್ಲದೆ ಇಲ್ಲಿನ ಜನತೆಯಲ್ಲೂ ಭಯದ ವಾತಾವರಣವು ಸೃಷ್ಟಿಯಾಗಿದೆ.
ಅನ್ಯ ರಾಜ್ಯದಿಂದ ಬಂದವರ ಗೊಂದಲ: ಮಹಾರಾಷ್ಟ್ರ, ಗುಜರಾತ್, ಗೊವಾ ಮತ್ತಿತರ ಕಡೆಗಳಿಂದ ದಕ ಜಿಲ್ಲೆಗೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅವರ ವೈದ್ಯಕಿಯ ವರದಿಯಿಲ್ಲದೆ ಇಲ್ಲಿ ಗೊಂದಲ ಉಂಟಾಗಿದೆ. ಕೋವಿಡ್ ನೆಗೆಟಿವ್ ವರದಿ ರಹಿತರಾಗಿ ಜೆಲ್ಲೆ ಪ್ರವೇಶಿಸುತ್ತಿದ್ದು, ತಪಾಸಣಾ ಕೇಂದ್ರದ ಸಿಬ್ಬಂದಿಗಳಿಗೆ ಸಮಸ್ಯೆಯಾಗಿದೆ. ತಪಾಸಣಾ ಕೇಂದ್ರದಲ್ಲಿ ಅವರ ದೇಹದ ತಾಪಮಾನವನ್ನು ಮಾತ್ರ ಪರಿಶೀಲಿಸಿ ಕ್ವಾರೆಂಟೈನ್‍ಗೆ ಬಿಡಲಾಗುತ್ತಿದೆ. ಕ್ವಾರೆಂಟೈನ್ ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿಯೂ ಸಾರ್ವಜನಿಕ ಅಂತರವನ್ನಿಲ್ಲಿ ಕಾಪಾಡಿಕೊಳ್ಳಲಾಗುತ್ತಿಲ್ಲ. ಅದೇ ರೀತಿ ಸಾರ್ವಜನಿಕ ಅಂತರವನ್ನು ಕಾಪಾಡುವ ರೀತಿಯಲ್ಲಿ ನಿಂತಿರಲು ಇವರಿಗೆ ಸೂಕ್ತ ವ್ಯವಸ್ಥೆಗಳೂ ಕುಂಠಿತವಾಗಿದೆ.
ಪ್ರತಿಯೊಬ್ಬರೂ ಕನಿಷ್ಟ ಎರಡು ಗಂಟೆ ಕಾಲ ಇಲ್ಲಿ ನಿಲ್ಲಬೇಕಿದೆ.

ಅರ್ಜಿ ಭರ್ತಿ ಮಾಡಿದ ಬಳಿಕ ಇವರಿಗೆ ಆಯಾಯ ಗ್ರಾಮದಲ್ಲಿನ ಕ್ವಾರೆಂಟೈನ್ ಕೇಂದ್ರದ ಮಾಹಿತಿ ಲಭಿಸುವುದೂ ವಿಳಂಬವಾಗುತ್ತಿದೆ. ಆಯಾಯ ಅಧಿಕಾರಿಗಳ ಮೂಲಕ ಈ ಎಲ್ಲಾ ಕ್ಲಪ್ತ ಮಾಹಿತಿ ಲಭ್ಯವಾಗುವವರೆಗೆ ಅನ್ಯ ರಾಜ್ಯಗಳಿಂದ ಆಗಮಿಸಿರುವ ಮಂದಿ ಇಲ್ಲೆ ಉಳಿದುಕೊಳ್ಳಬೇಕಾಗುತ್ತದೆ. ವೃಥಾ ಕಾಲ ವಿಳಂಬವೂ ಆಗುತ್ತಿದೆ.
ತಪಾಸಣಾ ಕೇಂದ್ರದ ಸುತ್ತಮುತ್ತದಲೂ ಸಾರ್ವಜನಿಕರು ಇಷ್ಟಬಂದಂತೆ ತಿರುಗಾಡುತ್ತಿದ್ದು ಈ ಕುರಿತಾಗಿಯೂ ಜಿಲ್ಲಾಡಳಿತವು ಎಚ್ಚರವಹಿಸಬೇಕಾದ ಅಗತ್ಯತೆ ಇದೆ.