ಪಡುಬಿದ್ರಿ ಬಂಟರ ಭವನದಲ್ಲಿ ಆಟಿದ ಕೂಟ

ಪುರಾತನ ತುಳು ಸಂಸ್ಕøತಿಯ ಉಳಿವಿಗೆ ಯುವ ಜನತೆಯ ಮನವೊಲಿಸಬೇಕು-ಕುದಿ ವಸಂತ ಶೆಟ್ಟಿ

ಪಡುಬಿದ್ರಿ: ತುಳುನಾಡಿನ ಭವ್ಯ ಪರಂಪರೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಜನಾಂಗದವರನ್ನು ಮನವೊಲಿಸುವ ಕಾರ್ಯ ಅಗತ್ಯವಾಗಿ ನಡೆಯಬೇಕು. ನಮ್ಮ ನಂಬಿಕೆ,ಆರಾಧನೆ ಮತ್ತು ಆಚರಣೆಗಳ ಬಗ್ಗೆ ಎಳೆಯರು ತಿಳಿದುಕೊಳ್ಳಲೇಬೇಕಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ ಹೇಳಿದರು.

ಪಡುಬಿದ್ರಿ ಬಂಟರ ಸಂಘದ ಬಂಟರ ಭವನದಲ್ಲಿ ಭಾನುವಾರ ಸಂಘದ ಮಹಿಳಾ ವಿಭಾಗದ ವತಿಯಿಂದ ಹಮ್ಮಿಕೊಂಡ ಆಟಿದ ಕೂಟ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಅವರು ಮಾತನಾಡಿದರು.

ಸಂಘಟನೆಗಳು ಬಲಯುತಗೊಳ್ಳಲು ಸಮಯ ಪರಿಪಾಲನೆ ಅವಶ್ಯಕ ಎಂದ ಅವರು ಆಟಿ ತಿಂಗಳಲ್ಲಿ ಬೆಳೆಯುವ ಎಲ್ಲಾ ಗಿಡ ಮರಗಳು ವಿಷಕಾರಿ ಅಂಶಗಳನ್ನು ಹೊರಹಾಕುವ ಹಿನ್ನೆಲೆಯಲ್ಲಿ ಅವೆಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ. ಆಟಿ ಅಮವಾಸ್ಯೆ ಇತರೆಲ್ಲಾ ಅಮವಾಸ್ಯೆಗಳಿಗಿಂತ ಮಹತ್ವವನ್ನು ಹೊಂದಿದೆ. ಆ ಒಂದೇ ದಿನ ಹಾಳೆಯ ಮರದಲ್ಲಿ ಅತೀ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿರುತ್ತದೆ ಎಂದವರು ಹೇಳಿದರು.

ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಪಡುಬಿದ್ರಿ ಬಂಟರ ಸಂಘವು ಸಮಾಜದ ಉನ್ನತೀಕರಣದ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಂಘದ ಯುವ ಬಂಟರ ವಿಭಾಗದ ವತಿಯಿಂದ ಅಗಸ್ಟ್ 25 ರಂಂದು ಯುವ ಬಂಟ ಸಮಾವೇಶ ನಡೆಸಲಿದೆ. ಸೆಪ್ಟಂಬರ್ ತಿಂಗಳಲ್ಲಿ ಸಿರಿಮುಡಿ ದತ್ತಿನಿಧಿ ವತಿಯಿಂದ ವಿದ್ಯಾರ್ಥಿವೇತನ ವಿತರಣೆ ನಡೆಯಲಿದೆ. ನವೆಂಬರ್ ತಿಂಗಳಲ್ಲಿ ಬೃಹತ್ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ.

ಪ್ರತಿ ತಿಂಗಳ ಆರಂಭದ ವಾರದಲ್ಲಿ ಸತ್ಯನಾರಾಯಣ ಪೂಜೆ ನಡೆಸಲಾಗುತ್ತಿದೆ. ಸಂಘದ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಗ್ರಾಮ ಸಭೆಗಳನ್ನು ಆಯೋಜಿಸಿ, ಸಮಾಜದ ಸದಸ್ಯರ ಸಕ್ರಿಯ ಭಾಗವಹಿಸುವಿಕೆಗೆ ಉತ್ತೇಜನ ನೀಡಲಾಗುತ್ತಿದ್ದು, ಈಗಾಗಲೇ 3 ಗ್ರಾಮ ಸಭೆಗಳನ್ನು ನಡೆಸಲಾಗಿದೆ ಎಂದರು.

ಚೆನ್ನೆಮಣೆ ಮೂಲಕ ಚಾಲನೆ: ಸಮಾಜದ ಹಿರಿಯರಾದ ಲೀಲಾವತಿ ಶೆಟ್ಟಿ ಮತ್ತು ಸುಲೋಚನಾ ಶೆಟ್ಟಿಯವರು ಎರ್ಮಾಳು ತೆಂಕ ಲಿಂಗು ಮತ್ತು ಮುತ್ತು ಕುಂದರ್‍ರವರ ಸಿರಿ ಪಾಡ್ದನದ ಹಿನ್ನೆಲೆಯಲ್ಲಿ ಚೆನ್ನೆಮಣೆ ಆಟವಾಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ನೇತ್ರಾವತಿ ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಬಂಟರ ಸಂಘದ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ವೈ.ಶಶಿಧರ್ ಶೆಟ್ಟಿ, ಸಿರಿಮುಡಿ ದತ್ತಿನಿಧಿ ಗೌರವಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಮಹಿಳಾ ವಿಭಾಗದ ಕಾರ್ಯದರ್ಶಿ ಜ್ಯೋತಿ ಶೆಟ್ಟಿ ಎರ್ಮಾಳು, ಕೋಶಾಧಿಕಾರಿ ಜಯಂತಿ ಎಸ್.ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಸನ್ಮಾನ: ಇದೇ ಸಂದರ್ಭ ಕುದಿ ವಸಂತ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಶೋಭಾ ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಅಕ್ಷತಾ ಸುರೇಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.

ಫೋಟೋ:ಕ್ಯಾ: ಲೀಲಾವತಿ ಶೆಟ್ಟಿ ಮತ್ತು ಸುಲೋಚನಾ ಶೆಟ್ಟಿಯವರು ಎರ್ಮಾಳು ತೆಂಕ ಲಿಂಗು ಮತ್ತು ಮುತ್ತು ಕುಂದರ್‍ರವರ ಸಿರಿ ಪಾಡ್ದನದ ಹಿನ್ನೆಲೆಯಲ್ಲಿ ಚೆನ್ನೆಮಣೆ ಆಟವಾಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.