Suzlon compound wall collapse

ಪಡುಬಿದ್ರಿ: ಗಾಳಿಯಂತ್ರ ತಯಾರಿಕಾ ಘಟಕವಾಗಿ ಕೈಗಾರಿಕಾ ಎಸ್‍ಇಝಡ್‍ನ್ನು ಮುನ್ನಡೆಸುತ್ತಿರುವ ಬಹುರಾಷ್ಟ್ರೀಯ ಕಂಪನಿ ಸುಜ್ಲಾನ್‍ಗೆ ನೀಡಲಾದ 600 ಎಕ್ರೆಗೂ ಮಿಕ್ಕಿದ ಭೂಪ್ರದೇಶಕ್ಕೆ ನಿರ್ಮಿಸಲಾದ ಆವರಣಗೋಡೆಯು ಪಡುಬಿದ್ರಿ ಬೀಡು ಸಮೀಪದ ಅಂಡರ್‍ಪಾಸ್ ಬಳಿ ಭಾರೀ ಮಳೆಯ ಕಾರಣದಿಂದಾಗಿ ಸಾರ್ವಜನಿಕ ರಸ್ತೆಯ ಮೇಲೆ ಕುಸಿದು ಬಿದ್ದಿದ್ದು, ಅವರಾಲುಮಟ್ಟು ಸಹಿತ ಆ ಭಾಗದಿಂದ ನಿತ್ಯ ಸಂಚರಿಸುವವರಿಗೆ ತೊಂದರೆಯುಂಟಾಗಿದೆ.

ಅಲ್ಲಲ್ಲಿ ಶಿಥಿಲವಾಗಿರುವ ಈ ಆವರಣಗೋಡೆಯಿಂದಾಗಿ ಇನ್ನಷ್ಟು ಕುಸಿತ ಮತ್ತು ಅಪಾಯದ ಮುನ್ಸೂಚನೆಯನ್ನೂ ಸಾರ್ವಜನಿಕರು ಎದುರಿಸುವಂತಾಗಿದೆ. ಸುಮಾರು 20 ಅಡಿಗಳಷ್ಟು ಕುಸಿತವಾಗಿರುವ ಈ ಆವರಣಗೋಡೆಯ ಅವಶೇಷಗಳನ್ನು ಈಗಾಗಲೇ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಹಾಗಾಗಿ ಸಾರ್ವಜನಿಕ ಸಂಪರ್ಕ ರಸ್ತೆಯಲ್ಲಿನ ಜನ, ವಾಹನ ಸಂಚಾರಗಳಿಗೆ ಈಗಾಗಲೇ ಅನುವುಮಾಡಿಕೊಡಲಾಗಿದೆ.

ಸುಜ್ಲಾನ್ ಭೂ ಪ್ರದೇಶದೊಳಗೆ ಮಳೆಯ ನೀರು ಅಲ್ಲಲ್ಲಿ ಆವರಣಗೋಡೆಯ ಬಳಿಯೇ ಶೇಖರಣೆಯಾಗುತ್ತಿದ್ದು ಈಗಾಗಲೇ ಹಲವೆಡೆಗಳಲ್ಲಿ ಇದು ಶಿಥಿಲಗೊಂಡಿವೆ. ವಾಲಿ ನಿಂತಿದೆ. ಮಳೆ, ಗಾಳಿಯ ಭೀಕರತೆಯನ್ನು ಅನುಸರಿಸಿ ಮುಂದೆಯೂ ಕುಸಿತದ ಸರಮಾಲೆಗಳು ಸಂಭವಿಸುವ ಅಪಾಯವಿರುವುದಾಗಿ ಸ್ಥಳೀಯ ಸಾರ್ವಜನಿಕರು ಹೇಳುತ್ತಾರೆ.
ಅವರಾಲು ಮಟ್ಟು-ಪಡುಬಿದ್ರಿಗಳನ್ನು ಸಂಪರ್ಕಿಸಲು ಇರುವ ಜಿ. ಪಂ. ರಸ್ತೆಯ ಅಲ್ಲಲ್ಲಿನ ಭಾಗದಲ್ಲಿ ಸುಜ್ಲಾನ್ ಆವರಣ ಗೋಡೆಯ ಶಿಥಿಲಗೊಂಡ ಅವಶೇಷಗಳು ಕಾಣಸಿಗುತ್ತಿವೆ. ಇಲ್ಲಿ ಸಂಚರಿಸಲು ಅಸಾಧ್ಯವಾಗಿದೆ. ಇದರಾಚೆಗೆ ಹಲವಾರು ಎಕ್ರೆ ಕೃಷಿಭೂಮಿಗಳೂ ಇದ್ದು ಈ ಹಿಂದೆ ಆವರಣಗೋಡೆ ಕುಸಿದಿದ್ದ ಸಂದರ್ಭಗಳಲ್ಲಿ ಕೆಸರು ನೀರು ಕೃಷಿಭೂಮಿಗೆ ನುಗ್ಗಿ ರೈತರೂ ಪಡಬಾರದ ಪಾಡನ್ನು ಅನುಭವಿಸಿದ್ದರು.

ಆವರಣಗೋಡೆಯ ಬಳಿ ಬೆಳೆದು ನಿಂತಿರುವ ಮರಗಿಡಗಳೂ ಬೀಸುವ ಭಾರೀ ಗಾಳಿಗೆ ಸಾರ್ವಜನಿಕ ರಸ್ತೆಗೆ ಬಿದ್ದರೂ ಅದನ್ನೂ ಸಾರ್ವಜನಿಕರೇ ತೆರವುಗೊಳಿಸಬೇಕಾದ ಅನಿವಾರ್ಯತೆಯೂ ಇಲ್ಲಿ ಇದೆ. ಇದನ್ನು ಜಿಲ್ಲಾಡಳಿತವು ಗಮನಿಸಿ ಕಂಪೆನಿಗೆ ಸೂಕ್ತ ಮಾರ್ಗದರ್ಶನವಿತ್ತು ರಿಪೇರಿ ಕಾಮಗಾರಿ ನಡೆಸಲು ಆದೇಶಿಸಬೇಕಾಗಿದೆ.