ಹೆಜಮಾಡಿ ಸಿಎಸ್‍ಪಿ ಇನ್ಸ್‍ಪೆಕ್ಟರ್ ಹರೀಶ್ಚಂದ್ರ ಕೆಪಿ ವಿಧಿವಶ

ಮೂಲ್ಕಿ: ಹೆಜಮಾಡಿಯ ಕರಾವಳಿ ಕಾವಲು ಪೋಲಿಸ್ ಪಡೆ(ಸಿಎಸ್‍ಪಿ)ಯ ನಿರೀಕ್ಷಕ ಹರೀಶ್ಚಂದ್ರ ಕೆಪಿ(54) ಹೃದಾಘಾತದಿಂದ ಬುಧವಾರ ಮುಂಜಾನೆ ಮೂಲ್ಕಿ ಕೊಲ್ನಾಡಿನ ಸ್ವಗೃಹದಲ್ಲಿ ನಿಧನರಾದರು.

ಮೂಲತಃ ಕಾಸರಗೋಡಿನವರಾದ ಅವರು ಪೋಲೀಸ್ ವೃತ್ತಿಯಲ್ಲಿದ್ದ ತನ್ನ ಸಹೋದರರೊಂದಿಗೆ ಕಡಬದಲ್ಲಿ ಶಿಕ್ಷಣ ಪಡೆದು ಮುಂದೆ ಕರ್ನಾಟಕ ಪೋಲಿಸ್ ಸೇವೆಗೆ ಮಡಿಕೇರಿಯಲ್ಲಿ ನಿಯುಕ್ತಿಗೊಂಡಿದ್ದರು.ಪದೋನ್ನತಿ ಹೊಂದುತ್ತಾ ಮಡಿಕೇರಿ,ಮಡಿಕೇರಿ ಗ್ರಾಮಂತರ,ವಿರಾಜಪೇಟೆ,ಕುಟ್ಟ,ಕದ್ರಿ ಟ್ರಾಫಿಕ್,ವಿಟ್ಲಗಳಲ್ಲಿ ಕಾರ್ಯನಿರ್ವಹಿಸಿದ ಬಳಿಕ ಸುಮಾರು ಎರಡೂವರೆ ವರ್ಷಗಳ ಹಿಂದೆ ಹೆಜಮಾಡಿಯ ಕರಾವಳಿ ಕಾವಲು ಪೋಲಿಸ್ ಪಡೆಯ ನಿರೀಕ್ಷಕರಾಗಿ ನಿಯುಕ್ತಿಗೊಂಡಿದ್ದರು.

ಇದೇ ಸಂದರ್ಭ ಮೂಲ್ಕಿಯ ಕೊಲ್ನಾಡು ಚಂದ್ರಮೌಳೀಶ್ವರ ದೇವಳ ಸಮೀಪ ಜಾಗ ಖರೀದಿಸಿ ಸಾಲ ಮಾಡಿ ಒಂದೂವರೆ ವರ್ಷದ ಹಿಂದೆ ಮನೆ ನಿರ್ಮಿಸಿಕೊಂಡು ಇಲ್ಲೇ ವಾಸವಿದ್ದರು.

ಸುಮಾರು 15 ದಿನದ ಹಿಂದೆ ಅವರಿಗೆ ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆಗೊಂಡಿದ್ದು,ಇನ್ನೇನು ಕೆಲವೇ ದಿನಗಳಲ್ಲಿ ವರ್ಗಾವಣೆಯಾಗಲಿದ್ದರು.

ಬುಧವಾರ ಮುಂಜಾನೆ 6ಗಂಟೆ ವೇಳೆಗೆ ಅವರಿಗೆ ಹೃದಾಯಾಘಾತವಾಗಿದ್ದು ತಕ್ಷಣ ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

ಅವರಿಗೆ ಪತ್ನಿ,2 ಪುತ್ರ ಇದ್ದಾರೆ.ಸರಳ ಸಜ್ಜನಿಕೆ ವ್ಯಕ್ತಿತ್ವದ ಅವರು ಎಲ್ಲರೊಂದಿಗೂ ಬೆರೆಯುತ್ತಾ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಗುರುವಾರ ಬೆಳಿಗ್ಗೆ ಅಂತ್ಯಕ್ರಿಯೆ: ಪೋಲಿಸ್ ಗೌರವದ ಬಳಿಕ ಗುರುವಾರ ಬೆಳಿಗ್ಗೆ ಅವರ ಕೊಲ್ನಾಡುವಿನ ಸ್ವಗೃಹ ಶುಭದೇವಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್,ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್,ಉಪಾಧ್ಯಕ್ಷ ಸುಧಾಕರ ಕರ್ಕೇರ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.