ಹೆಜಮಾಡಿ ಮುಟ್ಟಳಿವೆ ಮರು ಸೇತುವೆ ನಿರ್ಮಾಣಕ್ಕೆ ಪರಿಶೀಲನೆ ಜಿಪಂ ಸ್ಥಾಯೀ ಸಮಿತಿ,ಇಲಾಖಾಧಿಕಾರಿಗಳ ಭೇಟಿ

ಪಡುಬಿದ್ರಿ: ಸುಮಾರು 80 ಲಕ್ಷ ರೂ.ವ್ಯಯಿಸಿ ಹೆಜಮಾಡಿ ಮತ್ತು ಪಡುಬಿದ್ರಿ ಗ್ರಾಮಗಳ ಸಂಗಮ ಸ್ಥಳ ಮುಟ್ಟಳಿವೆ ಬಳಿ ನಿರ್ಮಿಸಿದ ಸೇತುವೆಯು ಉಪಯೋಗಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಮಂಗಳವಾರ ಜಿಪಂ ಸ್ಥಾಯಿ ಸಮಿತಿ ಮತ್ತು ಬಂದರು ಮೀನುಗಾರಿಕಾ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಪಂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿಯವರು ಜಿಪಂ ಮಾಸಿಕ ಸಭೆಯಲ್ಲಿ ಸೇತುವೆ ನಿಷ್ಪ್ರಯೋಜಕವಾಗಿರುವ ಬಗ್ಗೆ ಪ್ರಸ್ತಾವಿಸಿ ಅನುದಾನ ತಡೆಹಿಡಿಯುವಂತೆ ಮನವಿ ಮಾಡಿದ್ದರು.
ಈ ಬಗ್ಗೆ ಸಭೆ ನಿರ್ಧರಿಸಿದಂತೆ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿಯ ಅಧ್ಯಕ್ಷ ಉzಯ ಕೋಟ್ಯಾನ್,ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಾಶ್ರ್ವನಾಥ್,ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉದಯ ಶೆಟ್ಟಿ,ಪಿಡಬ್ಲ್ಯುಡಿ ಇಂಜಿನಿಯರ್ ಮಿಥುನ್ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ಶಶಿಕಾಂತ್ ಪಡುಬಿದ್ರಿ,ಕಾಮಿನಿ ಹೊಳೆ-ಸಮುದ್ರ ಸಂಗಮ ಸ್ಥಳದಲ್ಲಿ ಸೇತುವೆ ನಿರ್ಮಾಣದಿಂದ ಪಡುಬಿದ್ರಿ ಭಾಗದಲ್ಲಿ ಕೃತಕ ನೆರೆಯುಂಟಾಗಿದೆ.ಸೇತುವೆಯ ಆಳ ಕಡಿಮೆಯಾಗಿರುವ ಕಾರಣ ಸಮಸ್ಯೆ ಪರಿಹರಿಸಲಾದಷ್ಟು ದೊಡ್ಡದಾಗಿದೆ.ಅದರ ಬದಲು ಈಗ ಹೊಳೆ ನೀರು ಸಮುದ್ರ ಸೇರುವ ಜಾಗದಲ್ಲಿ ಮತ್ತೊಂದು ಸೇತುವೆ ನಿರ್ಮಿಸಬೇಕು.ಇದರಿಂದ ಹೊಳೆ ಭಾಗದ ಜನರಿಗೆ ಉಪಯೋಗವಾಗಲಿದೆ ಎಂದರು.

ಸಾರ್ವಜನಿಕ ಅಭಿಪ್ರಾಯ ಪರಿಗಣಿಸದೆ ಸರಕಾರಿ ಅನುದಾನವನ್ನು ನಿಷ್ಪ್ರಯೋಜಕಗೊಳಿಸಿದ ಬಗ್ಗೆ ಉzಯ ಕೋಟ್ಯಾನ್ ಆಕ್ರೋಷ ವ್ಯಕ್ತಪಡಿಸಿದರು.ಈ ಬಗ್ಗೆ ಜಿಪಂಗೆ ಸಮಗ್ರ ಮಾಹಿತಿ ನೀಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.

ಹೊಸ ಸೇತುವೆ ನಿರ್ಮಾಣಕ್ಕೆ ಸರ್ವೇ ನಡೆಸಿ ಆದಷ್ಟು ಬೇಗ ಕ್ರಿಯಾಯೋಜನೆ ರೂಪಿಸುವುದಾಗಿ ಇಂಜಿನಿಯರ್ ಉದಯ ಶೆಟ್ಟಿ ಹೇಳಿದರು.
ಬಳಿಕ ಜಿಪಂಗೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಕ್ರೋಢೀಕರಣಕ್ಕೆ ಪ್ರಯತ್ನಿಸಲಾಗುವುದು ಎಂದು ಶಶಿಕಾಂತ್ ಪಡುಬಿದ್ರಿ ಹೇಳಿದರು.