ಹೆಜಮಾಡಿ ಮುಟ್ಟಳಿವೆ ಪ್ರದೇಶಕ್ಕೆ ದೌಡಾಯಿಸಿದ ಇಲಾಖಾಧಿಕಾರಿಗಳು-ಮಾದರಿ ಪರಿಶೀಲನೆ

ಎಚ್ಕೆ ಹೆಜ್ಮಾಡಿ,ಪಡುಬಿದ್ರಿ

ಸೋಮವಾರ ವಿಕ ದಲ್ಲಿ ಪ್ರಕಟವಾದ “ಹೆಜಮಾಡಿ ಮುಟ್ಟಳಿವೆಯಲ್ಲಿ ಸತ್ತ ಮೀನಿನ ರಾಶಿ” ವರದಿಗೆ ತುರ್ತಾಗಿ ಸ್ಪಂದಿಸಿದ ವಿವಿಧ ಇಲಾಖಾಧಿಕಾರಿಗಳು ಸೋಮವಾರ ಬೆಳಿಗ್ಗೆಯೇ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನದ ನಡೆಸಿದ್ದಾರೆ.
ಉಡುಪಿ ಜಿಲ್ಲಾ ಪರಿಸರ ಇಲಾಖೆ, ಜಿಲ್ಲಾ ಮೀನುಗಾರಿಕಾ ಇಲಾಖೆ, ಮಂಗಳೂರು ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಕೇಂದ್ರ ಮತ್ತು ಯುಪಿಸಿಲ್ ಸ್ಥಾವರದ ತಜ್ಞರ ತಂಡ ಹೆಜಮಾಡಿಯ ಮುಟ್ಟಳಿವೆಗೆ ಆಗಮಿಸಿ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದರು.

ಸೋಮವಾರವೂ ಮುಟ್ಟಳಿವೆಯ ದಕ್ಷಿಣ ಭಾಗದಲ್ಲಿ ಸತ್ತ ಮೀನಿನ ರಾಶಿಗಳನ್ನು, ಮುಟ್ಟಳಿವೆಯಲ್ಲಿ ಹರಿಯುತ್ತಿರುವ ಕಲುಷಿತ ನೀರನ್ನು ಹಾಗೂ ಹೊಳೆ ನೀರು ಕಲುಷಿತಗೊಂಡಿದ್ದನ್ನು ಕಣ್ಣಾರೆ ವೀಕ್ಷಿಸಿದರು.


ಈ ಸಂದರ್ಭ ಮುಟ್ಟಳಿವೆಯಿಂದ ಸಮುದ್ರಕ್ಕೆ ಸೇರುವ ಜಾಗದ ನೀರು ಮತ್ತು ಮಣ್ಣು, ಮೀನುಗಳು ಸತ್ತು ಬಿದ್ದ ಜಾಗದ ನೀರು, ಮಣ್ಣು ಮತ್ತು ಸತ್ತುಬಿದ್ದ ಮೀನು, ಸಮುದ್ರ ನೀರು, ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ಬಳಿಯ ಕಲ್ಸಂಕ ಬಳಿ ಕಾಮಿನಿ ಹೊಳೆಯ ನೀರು, ಪಡುಬಿದ್ರಿ ಬೀಚ್ ಬಳಿ ಕಲುಷಿತಗೊಂಡ ಮನೆಯೊಂದರ ಬಾವಿಯ ನೀರುಗಳ ಮಾದರಿಗಳನ್ನು ಪಡೆದು ತಪಾಸಣೆಗಾಗಿ ಕೊಂಡೊಯ್ಯಲಾಯಿತು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್, ವರದಿಯ ಬಗ್ಗೆ ತಿಳಿದ ತಕ್ಷಣ ಘಟನೆಯ ಗಂಭೀರತೆಯನ್ನು ಪರಿಗಣಿಸಿ ತಕ್ಷಣ ಇಲ್ಲಿಗೆ ಆಗಮಿಸಿದ್ದೇವೆ. ಮೀನುಗಳು ಲಕ್ಷಾಂತರ ಸಂಖ್ಯೆಯಲ್ಲಿ ಸತ್ತುಬಿದ್ದಿದ್ದು ಗಂಭೀರ ವಿಷಯ. ಈ ಬಗ್ಗೆ ಮಾದರಿಗಳನ್ನು ಪಡೆಯಲಾಗಿದ್ದು, ವರದಿಯಾಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಘಟನೆಗೆ ಸಂಬಂಧಿಸಿ ವಿವಿಧ ಆಯಾಮಗಳ ಬಗ್ಗೆ ಪರಿಶೀಲನೆ ನಡೆಯಲಿದೆ. ಸ್ಥಳೀಯ ಮೀನುಗಾರರ ಅನುಮಾನದಂತೆ ಯುಪಿಸಿಎಲ್ ಸ್ಥಾವರದ ಕಲ್ಲಿದಲ ನೀರಿನ ಬಗ್ಗೆಯೂ ತನಿಖೆ ನಡೆಸಲಾಗುವುದು. ಮುಟ್ಟಳಿವೆ ತೆರೆಯುವ ಮುನ್ನ ಬದುಕಿದ್ದ ಮೀನುಗಳು ಮುಟ್ಟಳಿವೆ ತೆರೆದ ತಕ್ಷಣ ಮೀನುಗಳು ಸಾಯಲು ಕಾರಣವೇನೆಂದು ತಿಳಿಯಬೇಕಿದೆ. ಆಮ್ಲಜನಕ ಅಥವಾ ಲವಣಾಂಶಗಳ ವ್ಯತ್ಯಯದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಮೀನುಗಾರಿಕಾ ಇಲಾಖಾ ಉಪ ನಿರ್ದೇಶಕ ಪಾಶ್ರ್ವನಾಥ್ ಮಾತನಾಡಿ, ಘಟನೆಯ ಗಂಭೀರತೆ ಬಗ್ಗೆ ಅರಿವಿದ್ದು, ಕೂಲಂಕುಷವಾಗಿ ಪರಿಶೀಲಿದ ಬಳಿಕವಷ್ಟೇ ಕಾರಣ ತಿಳಿಯಬೇಕಿದೆ. ಹಿಂದೆ ಯಾವತ್ತೂ ಇಂತಹ ಘಟನೆಗಳು ನಡೆದಿಲ್ಲ. ಪ್ರಯೋಗಾಲಯದ ವರದಿ ಬಳಿಕ ಕಾರಣ ತಿಳಿದು ಬರಲಿದೆ. ನೀರಿನ ಬಣ್ಣವೂ ಬದಲಾಗಿದೆ. ಮೀನುಗಳು ಸತ್ತು ಬಿದ್ದಿರುವ ಪ್ರದೇಶಗಳಲ್ಲಿ ನೀರಿನೊಳಗಿನ ಮರಳಿನ ಬಣ್ಣವೂ ಬದಲಾಗಿದೆ ಎಂದರು.

ಮಂಗಳೂರು ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಕೇಂದ್ರದ ತಜ್ಞ ಅಧಿಕಾರಿ ಡಾ. ವೀಣಾ ಶೆಟ್ಟಿಗಾರ್, ಇಲಾಖಾ ಮುಖ್ಯಸ್ಥರಾದ ಡಾ.ಪ್ರತಿಭಾ ರೋಹಿತ್ ನಿರ್ದೇಶನದಂತೆ ಘಟನಾ ಸ್ಥಳದ ವಿವಿಧ ಮಾದರಿಗಳನ್ನು ಪಡೆಯಲಾಗಿದ್ದು, ಇಲಾಖಾ ಪ್ರಯೋಗಾಲಯದಲ್ಲಿ ಪರಿಶೀಲಿಸಲಾಗುವುದು. ಈ ಬಗ್ಗೆ 5 ದಿನದ ಬಳಿಕ ವರದಿ ಸಿದ್ಧವಾಗಲಿದೆ ಎಂದರು.

ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ, ಹೆಜಮಾಡಿ ಏಳೂರು ಮೊಗವೀರ ಸಭಾದ ಅಧ್ಯಕ್ಷ ಸದಾಶಿವ ಕೋಟ್ಯಾನ್, ಸ್ಥಳೀಯರಾದ ಲಲಿತ್ ಕುಮಾರ್ ಇಲಾಖಾಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿದರು. ಸ್ಥಳೀಯ ಮೀನುಗಾರ ಕೃಷ್ಣ ಕೃಷ್ಣ ಕೋಟ್ಯಾನ್ ಎಂಬವರು ಈ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ವರ್ಷಪೂರ್ತಿ ಮೀನುಗಾರಿಕೆ ನಡೆಸುತ್ತಾ ಬಂದವರು. ಇಂತಹ ಪರಿಸ್ಥಿತಿ ಯಾವತ್ತೂ ಕಂಡುಬಂದಿಲ್ಲ. ಈ ಭಾಗದಲ್ಲಿ ಮತ್ತೆ ಮೀನುಗಾರಿಕೆ ಆರಂಭಗೊಳ್ಳಲು ಕನಿಷ್ಟ ಒಂದು ತಿಂಗಳಾದರೂ ಬೇಕು ಎಂದರು.
ಘಟನೆಗೆ ಯುಪಿಸಿಎಲ್ ಕಲ್ಲಿದ್ದಲ ನೀರೇ ಕಾರಣ ಎಂದು ಸ್ಥಳೀಯ ಮೀನುಗಾರರ ಆರೋಪವನ್ನು ಪರಿಗಣಿಸಿ ಅದಾನಿ-ಯುಪಿಸಿಎಲ್ ತಜ್ಞರಾದ ಚೆನ್ನಬಸಪ್ಪ ಮತ್ತವರ ತಂಡವೂ ಆಗಮಿಸಿ ಪರಿಶೀಲನೆ ನಡೆಸಿ ಮಾದರಿಗಳನ್ನು ಕೊಂಡೊಯ್ದಿದೆ. ಈ ಸಂದರ್ಭ ಮಾತನಾಡಿದ ಅವರು, ಕಾಮಿನಿ ಹೊಳೆಗೆ ಕಲ್ಲಿದ್ದಲು ನೀರು ಬರುವ ಸಾಧ್ಯತೆ ಇಲ್ಲವೇ ಇಲ್ಲ. ಸ್ಥಾವರದಲ್ಲಿ ಅತ್ಯಾಧುನಿಕವಾಗಿ ಕಲ್ಲಿದ್ದಲುಗಳನ್ನು ಸಂರಕ್ಷಿಸಲಾಗುತ್ತಿದೆ. ಪಕ್ಕದಲ್ಲಿ ಕೆರೆ ನಿರ್ಮಿಸಿ ಅದರ ನೀರನ್ನು ಮರಳಿ ಉಪಯೋಗಿಸುವ ತಂತ್ರಜ್ಞಾನ ಅಳವಡಿಸಲಾಗಿದೆ. ಮೀನುಗಳು ಸತ್ತು ಬಿದ್ದಿರುವುದಕಕ್ಕೂ ಯುಪಿಸಿಎಲ್‍ಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.


ಈ ಸಂದರ್ಭ ಅವರು ಎಲ್ಲಾ ಇಲಾಖಾಧಿಕಾರಿಗಳನ್ನು ಸ್ಥಾವರದೊಳಗೆ ಕರೆದೊಯ್ದು ಕಲ್ಲಿದ್ದಲು ಸಂರಕ್ಷಿತ ಪ್ರದೇಶಗಳ ಮಾಹಿತಿ ನೀಡಿದರು.

ಪಡುಬಿದ್ರಿ ಬೀಚ್ ಬಳಿ ಕಾಮಿನಿ ಹೊಳೆಯ ಸಮೀಪದ ಸದಾಶಿವ ಪಡುಬಿದ್ರಿ ಎಂಂಬವರ ಮನೆ ಬಾವಿಯ ನೀರು ಕಲುಷಿತಗೊಂಡಿದೆ. ಈ ಬಗ್ಗೆ ಮಾಹಿತಿ ಅರಿತ ಇಲಾಖಾಧಿಕಾರಿಗಳು ಅಲ್ಲಿಗೂ ತೆರಳಿ ಮಾದರಿಗಳನ್ನು ಪರಿಶೀಲನೆಗಾಗಿ ಕೊಂಡೊಯ್ದಿದ್ದಾರೆ.
ಮೀನುಗಾರಿಕಾ ಇಲಾಖೆಯ ಅಧಿಕಾರಿ ಕಿರಣ್ ಜತೆಗಿದ್ದರು.