ಹೆಜಮಾಡಿ ಟೋಲ್ ವಿನಾಯಿತಿಗೆ ವಿಧಾನಸಭೆಯಲ್ಲಿ ಪ್ರಸ್ತಾವಿಸಿ ಸಮಸ್ಯೆಗೆ ಶೀಘ್ರ ಪರಿಹಾರ-ಐವನ್ ಡಿಸೋಜಾ, ಮೂಲ್ಕಿ ಸಂಪೂರ್ಣ ಬಂದ್ ನಡೆಸಿ ಹೆಜಮಾಡಿ ಟೋಲ್‍ವರೆಗೆ ಪ್ರತಿಭಟನಾ ಮೆರವಣಿಗೆ

ಪಡುಬಿದ್ರಿ: ಹೆಜಮಾಡಿ ಟೋಲ್ ವಿನಾಯಿತಿ ಬಗ್ಗೆ ಬುಧವಾರ ವಿಧಾನಸಭೆಯಲ್ಲಿ ಈ ಭಾಗದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಲುವಳಿ ಸೂಚನೆ ಮಂಡಿಸಿ ಟೋಲ್ ವಿನಾಯಿತಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದಾಗಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಹೇಳಿದರು.

ಮಂಗಳವಾರ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ ವತಿಯಿಂದ ಮೂಲ್ಕಿ ಬಂದ್ ಸಹಿತ ಹೆಜಮಾಡಿಯ ನವಯುಗ್ ಟೋಲ್‍ವರೆಗೆ ಪ್ರತಿಭಟನಾ ಮೆರವಣಿಗೆ ನಡೆದ ಬಳಿಕ ಸಭೆಯಲ್ಲಿ ಐವನ್ ಡಿಸೋಜಾ ಮಾತನಾಡಿದರು.

ದಿವಾಳಿಯಂಚಿನಲ್ಲಿರುವ ನವಯುಗ್ ಕಂಪನಿಗೆ ಹೆದ್ದಾರಿ ಕಾಮಗಾರಿ ಗುತ್ತಿಗೆ ನೀಡಿದ್ದೇ ತಪ್ಪು.ಮೊದಲು ರಸ್ತೆಯನ್ನು ಸುಸ್ಥಿತಿಯಲ್ಲಿಡಲಿ.ಸರ್ವಿಸ್ ರಸ್ತೆಗಳನ್ನು ನಿರ್ಮಿಸಲಿ.ಬಳಿಕ ಟೋಲ್ ಸಂಗ್ರಹಕ್ಕೆ ಮುಂದಾಗಿ ಎಂದರು.
ಟೋಲ್ ಪ್ಲಾಝಾ ಸುತ್ತಲಿನ 10 ಕಿಮೀ ವ್ಯಾಪ್ಯಿಯ ವಾಹನ ಬಳಕೆದಾರರಿಗೆ ಟೋಲ್ ವಿನಾಯಿತಿ ನೀಡಬೇಕೆಂಬ ನಿಯಮವಿದೆ.ಅದು ನಮ್ಮ ಹಕ್ಕು.ಅದಕ್ಕಾಗಿ ಯಾವುದೇ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದ ಅವರು ಟೋಲ್ ವ್ಯಾಪ್ತಿಯ ವಾಹನ ಬಳಕೆದಾರರು ಇಂದಿನಿಂದಲೇ ಟೋಲ್ ನೀಡಬೇಡಿ ಎಂದರು.

ಮೂಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ,ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಲೇಬೇಕು.ಈ ಬಗ್ಗೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಲಿದ್ದೇನೆ.ಇಲ್ಲಿನ ಟೋಲ್ ವಿರೋಧಿ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಮಾಜಿ ಶಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ,ಒಗ್ಗಟ್ಟು ನಮ್ಮ ಮಂತ್ರವಾಗಬೇಕು.ಉಡುಪಿ ಜಿಲ್ಲಾಧಿಕಾರಿ ಮತ್ತು ನವಯುಗ್ ಕಂಪನಿ ನಮ್ಮ ಬೇಡಿಕೆಗೆ ಶೀಘ್ರ ಸ್ಪಂದಿಸಬೇಕು.ಶಾಂತಿಪ್ರಿಯ ಕರಾವಳಿಗರನ್ನು ದುರುಪಯೋಗಪಡಿಸದಿರಿ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ,ಟೋಲ್ ವಿನಾಯಿತಿಗೆ ಆಗ್ರಹಿಸಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಶೀಘ್ರ ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾಗೋಣ ಎಂದರು.
ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಮಾತನಾಡಿ,ಇದು ಬಲವಂತದ ಬಂದ್ ಅಲ್ಲ.ನಮ್ಮ ಹಕ್ಕಿಗಾಗಿ ಸ್ವಯಂಸ್ಪೂರ್ತಿಯಿಂದ ನಡೆಸುತ್ತಿರುವ ಹೋರಾಟ.ನವಯುಗ್ ಹಠಕ್ಕೆ ಬಿದ್ದರೆ ನಮ್ಮದೂ ಹಠವಿದೆ.ಸಾಂಕೇತಿಕ ಪ್ರತಿಭಟನೆಗೆ ಮಣಿದು ಶೀಘ್ರ ವಿನಾಯಿತಿ ನೀಡಬೇಕು.ಇಲ್ಲದಿದ್ದರೆ ಉಗ್ರ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದರು.
ರಾಜ್ಯ ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ,ಹೋರಾಟದಿಂದ ಮಾತ್ರ ನಮ್ಮ ಬೇಡಿಕೆ ಈಡೇರಿಸಿಕೊಳ್ಳಬಹುದು ಎಂದರು.

ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ ಸಂಘಟಿತ ಹೋರಾಟದಿಂದ ಜಯ ಖಚಿತ.ಬೇಡಿಕೆ ಈಡೇರಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಮನವಿ ಸಲ್ಲಿಕೆ: ಇದೇ ಸಂದರ್ಭ ಮೂಲ್ಕಿ ವ್ಯಾಪ್ತಿಯ 5 ಕಿಮೀ ಸುತ್ತಲಿನ ವಾಹನ ಬಳಕೆದಾರರಿಗೆ ಟೋಲ್ ವಿನಾಯಿತಿಗೆ ಆಗ್ರಹಿಸಿ ಮೂಲ್ಕಿ ವಿಶೇಷ ತಹಶಿಲ್ದಾರ್ ಮಾಣಿಕ್ಯ,ಕಾಪು ತಹಶೀಲ್ದಾರ್ ಪ್ರದೀಪ್ ಕುಡೇಕರ್,ನವಯುಗ್ ಟೋಲ್ ಮ್ಯಾನೇಜರ್ ಶಿವಪ್ರಸಾದ್ ರೈಯವರಿಗೆ ಮನವಿ ಅರ್ಪಿಸಲಾಯಿತು.ಈ ಸಂದರ್ಭ ಪ್ರತಿಕ್ರಿಯಿಸಿದ ಶಿವಪ್ರಸಾದ ರೈ.ಇಂದಿನ ಹೋರಾಟದ ವೀಡಿಯೋ ಚಿತ್ರೀಕರಣವನ್ನು ಕಂಪನಿ ಮುಖ್ಯಸ್ಥರಿಗೆ ಈಗಾಗಲೇ ತಲುಪಿಸಿದ್ದೇವೆ.ಅವರು ಈ ಬಗ್ಗೆ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಮೆರವಣಿಗೆ: ಮೂಲ್ಕಿಯ ಆದಿಧನ್ ಹೋಟೆಲ್ ಮುಂಭಾಗದಿಂದ ಹೊರಟ ಪ್ರತಿಭಟನಾ ಮೆರವಣಿಗೆಗೆ ಅಮರನಾಥ ಶೆಟ್ಟಿ,ವಿನಯಕುಮಾರ್ ಸೊರಕೆ,ಅಭಯಚಂದ್ರ ಜೈನ್,ಹರಿಕೃಷ್ಣ ಪುನರೂರು ಚಾಲನೆ ನೀಡಿದರು.

ಅಲ್ಲಿಂದ ಹೆದ್ದಾರಿ ಮೂಲಕ ಉಡುಪಿ ಜಿಲ್ಲೆಯಲ್ಲಿರುವ (1.5 ಕಿಮೀ ದೂರ) ಹೆಜಮಾಡಿ ಟೋಲ್ ಪ್ಲಾಝಾವರೆಗೆ ನಡೆದುಕೊಂಡು ಮೆರವಣಿಗೆ ಮೂಲಕ ಸಾಗಿಬರಲಾಯಿತು.ಬಳಿಕ ಪ್ರತಿಭಟನಾ ಮೆವಣಿಗೆ ನಡೆಯಿತು.ಇದೇ ಮೊದಲ ಬಾರಿಗೆ ಮೂಲ್ಕಿ ಮೂಲ್ಕಿ ನಗರವಿಡೀ ಬಂದ್ ನಡೆಸಿ ಬೆಂಬಲ ಸೂಚಿಸಿದರು.ಸುಮಾರು 600 ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಬಪ್ಪನಾಡು ದೇವಳದ ಪ್ರಧಾನ ಅರ್ಚಕ ಶ್ರೀಪತಿ ಉಪಾಧ್ಯಾಯ,ಚರ್ಚ್ ಧರ್ಮಗುರುಗಳಾದ ಫಾ.ಎಡ್ವರ್ಡ್ ಕರ್ಕಡ ಮತ್ತು ಫಾ.ಸಿಲ್ವೆಸ್ಟರ್ ಡಿಕೋಸ್ಟಾ,ಮೂಲ್ಕಿ ಕೇಂಂದ್ರ ಮಸೀದಿಯ ಖತೀಬರಾದ ಎಸ್‍ಪಿ ಮೊಹಮ್ಮದ್ ದಾರಿಮಿ,ಅವಿಭಜಿತ ದಕ ಜಿಲ್ಲಾ ಟೋಲ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ,ಮೂಲ್ಕಿ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಹರೀಶ್ ಎನ್.ಪುತ್ರನ್,ಉಪಾಧ್ಯಕ್ಷ ಹಾಗೂ ಮೂಲ್ಕಿ-ಮೂಡಬಿದಿರೆ ಜೆಡಿಎಸ್ ಅಧ್ಯಕ್ಷ ಜೀವನ್ ಕೆ.ಶೆಟ್ಟಿ,ಉಪಾಧ್ಯಕ್ಷರಾದ ಸುನಿಲ್ ಆಳ್ವ ಮತ್ತು ಇಕ್ಬಾಲ್ ಅಹಮದ್ ಮೂಲ್ಕಿ ,ಧನಂಜಯ ಕೋಟ್ಯಾನ್ ಮಟ್ಟು,ಭಾಸ್ಕರ ಹೆಗ್ಡೆ ಮತ್ತಿತರರು ಮಾತನಾಡಿದರು.
ಎನ್‍ಎಸ್ ಮನೋಹರ ಶೆಟ್ಟಿ.ಎಮ್.ನಾರಾಯಣ ಶೆಟ್ಟಿ,ದಿನೇಶ್ ಹೆಗ್ಡೆ ಉಳೆಪಾಡಿ,ಮಧು ಆಚಾರ್ಯ,ಮುನೀರ್ ಕಾರ್ನಾಡ್,ವೆಂಕಟೇಶ್ ಹೆಬ್ಬಾರ್,ಶೇಖರ್ ಹೆಜ್ಮಾಡಿ,ಗುಲಾಂ ಮೊಹಮ್ಮದ್,ನವೀನ್‍ಚಂದ್ರ ಜೆ.ಶೆಟ್ಟಿ,ಸುಶೀಲ್ ನೊರೋನ್ಹಾ,ರತ್ನಾಕರ ಸುವರ್ಣ,ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್,ಅಬ್ದುಲ್ ರಜಾಕ್,ಶಾಲೆಟ್ ಪಿಂಟೋ,ವಸಂತ್ ಬೆರ್ನಾರ್ಡ್,ಪುತ್ತುಬಾವ,ಬಿಎಮ್ ಆಸಿಫ್,ದೇವಪ್ರಸಾದ್ ಪುನರೂರು,ಗೋಪಿನಾಥ ಪಡಂಗ,ಸತೀಶ್ ಅಂಚನ್,ಉದಯ ಶೆಟ್ಟಿ ಆದಿಧನ್,ಉದಯ ಅಮೀನ್,ಸಾಧು ಅಂಚನ್,ರಿಯಾಝ್ ಕಾರ್ನಾಡು,ಶಶಿಕಾಂತ್ ಶೆಟ್ಟಿ,ದೇವಣ್ಣ ನಾಯಕ್,ವಿನೋದ್ ಸಾಲ್ಯಾನ್,ರಂಗನಾಥ ಶೆಟ್ಟಿ,ಶೈಲೇಶ್ ಕುಮಾರ್,ಬಶೀರ್ ಕುಳಾಯಿ,ಅಕ್ಷಿತ್ ಸುವರ್ಣ,ರಾಮ್‍ಗಣೇಶ್,ಡಾ.ಎಮ್‍ಎ ಕುಡ್ವ,ಪುರುಷೋತ್ತಮ ರಾವ್,ಪ್ರಮೋದ್ ಸುವರ್ಣ,ಎಮ್.ನಾರಾಯಣ,ಸದಾಶಿವ ಹೊಸದುರ್ಗ,ಪ್ರಬೋದ್ ಕುಡ್ವ,ರವೀಂದ್ರ ಶೆಟ್ಟಿ,ಗೌತಮ್ ಜೈನ್,ವೀರಯ್ಯ ಹಿರೇಮಠ,ಅರ್ಜುನ್ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

– ಹರೀಶ್ ಹೆಜ್ಮಾಡಿ,ಪಡುಬಿದ್ರಿ