ಹೆಜಮಾಡಿ ಗಡಿಯಲ್ಲಿ ಅನಗತ್ಯ ಸಂಚಾರಕ್ಕೆ ತಡೆ

ಪಡುಬಿದ್ರಿ: ರಾಜ್ಯ ಸರ್ಕಾರದ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಅನಗತ್ಯವಾಗಿ ಉಡುಪಿ-ಮಂಗಳೂರು ಮಧ್ಯೆ ಸಂಚರಿಸಲು ಆಗಮಿಸಿದ ಜನರನ್ನು ಹೆಜಮಾಡಿ ಗಡಿಯ ಎರಡೂ ಚೆಕ್‍ಪೋಸ್ಟ್‍ಗಳಲ್ಲಿ ಪೊಲೀಸರು ತಡೆದು ಮಂಗಳವಾರ ಹಿಂದಕ್ಕೆ ಕಳುಹಿಸಿದರು.
ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯನ್ನು ಒಂದೇ ಘಟಕ ಎಂದು ಸರ್ಕಾರ ಘೋಷಣೆ ಮಾಡಿ, ಅಲ್ಲಿನ ವಾಣಿಜ್ಯ, ಸಂಸ್ಥೆ, ಕಂಪೆನಿ ಪತ್ರ ಮತ್ತು ಗುರುತು ಚೀಟಿಯಿರುವ ಉದ್ಯೋಗಿಗಳಿಗೆ ಸಂಚರಿಸಲು ಅವಕಾಶ ಕಲ್ಪಿಸಿದೆ. ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಅನಗತ್ಯವಾಗಿ ಅತ್ತಿಂದಿತ್ತ ಸಂಚರಿಸಲು ಆಗಮಿಸಿದ ಜನರನ್ನು ಪಾಸ್ ಇಲ್ಲದ ಹೊರತು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆ ಪ್ರವೇಶಿಸಲು ತಪಾಸಣಾ ಕೇಂದ್ರದಲ್ಲಿ ಅವಕಾಶ ನಿರಲಾಕರಿಸಲಾಯಿತು. ಪತ್ರಿಕಾ ವರದಿಗಳನ್ನೇ ಆಧಾರವಾಗಿಟ್ಟುಕೊಂಡು ನೂರಾರು ಮಂದಿ ಪಾಸ್ ರಹಿತರಾಗಿ ಗಡಿ ದಾಟಲು ವಾಹನಗಳಲ್ಲಿ ಆಗಮಿಸಿದ್ದರು.

200ಕ್ಕೂ ಅಧಿಕ ಕ್ವಾರಂಟೈನ್: ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆಯವರೆಗೆ ಉಡುಪಿ ಜಿಲ್ಲೆ ಪ್ರವೇಶಿಸಿದ ಕೇರಳ ರಾಜ್ಯದ 4 ಮಂದಿ, ಅನ್ಯ ಜಿಲ್ಲೆಗಳ ಸುಮಾರು 50 ಮಂದಿ ಮತ್ತು ಬೇರೆ ರಾಜ್ಯಗಳಿಂದ ದಕ್ಷಿಣಕನ್ನಡ ಜಿಲ್ಲೆ ಪ್ರವೇಶಿಸಿದ ಸುಮಾರು 160 ಜನರಿಗೆ ಹೆಜಮಾಡಿ ಗಡಿಯಲ್ಲಿ ಮೊಹರು ಹಾಕಿ ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್‍ಗೊಳಪಡಿಸಲಾಗಿದೆ.

ಪಡುಬಿದ್ರಿ ಲಾಡ್ಜಿಂಗ್‍ನಲ್ಲಿ 16 ಮಂದಿಗೆ ಕ್ವಾರಂಟೈನ್: ಪಡುಬಿದ್ರಿಯ ಹೆದ್ದಾರಿ ಬದಿಯ ಪ್ರಮುಖ ಲಾಡ್ಜಿಂಗ್ ಒಂದರಲ್ಲಿ 16 ಮಂದಿಯನ್ನು ಕ್ವಾರಂಟೈನ್‍ನಲ್ಲಿಡಲಾಗಿದೆ.
ಸ್ಥಳೀಯ ಪೋಲಿಸರು ಮತ್ತು ಆರೋಗ್ಯ ಇಲಾಖೆಗಳಿಗೆ ಪೂರ್ವ ಮಾಹಿತಿ ನೀಡದೆ ತೆಲಂಗಾಣ, ತಮಿಳುನಾಡು, ಮುಂಬೈ, ಗೋವಾಗಳಿಂದ ಬಂದ ಹೆಜಮಾಡಿ, ಶಿರ್ವ, ಸಾಂತೂರು, ಕಟಪಾಡಿ, ಸಂತೆಕಟ್ಟೆ ಹೆಬ್ರಿ ಹಾಗೂ ಇತರೆಡೆಯ 16 ಮಂದಿಯನ್ನು ಕ್ವಾರಂಟೈನ್‍ಗೊಳಪಡಿಸಲಾಗಿದೆ.

ಕ್ಯಾ: ಹೆಜಮಾಡಿ ಗಡಿಯಲ್ಲಿ ತಪಾಸಣೆ ನಡೆಸುತ್ತಿರುವ ಪೋಲಿಸರು.