ಸ್ವಾರ್ಥರಹಿತ ಸೇವೆ ಮಾಡಿದಾಗ ಸಮಾಜದಲ್ಲಿ ಕೀರ್ತಿ ಶೇಷರಾಗಿರುತ್ತಾರೆ: ಪುನರೂರು

ವಿÀುೂಲ್ಕಿ ಸ್ವಾರ್ತರಹಿತ ಹಾಗೂ ನಿಷ್ಕಳಂಕವಾಗಿ ಸಮಾಜದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ವ್ಯಕ್ತಿಗಳು ಕೀರ್ತಿಶೇಷರಾಗಿ ಮುಂದಿನ ಪೀಳಿಗೆಗೆ ಆದರ್ಶರಾಗಿ ಉಳಿಯುತ್ತಾರೆ. ನಾವು ಯಾರಿಗೂ ಕೆಡುಕನ್ನು ಬಯಸದೆ ಸಮಾಜದ ಎಳಿಗೆಗೆ ಪ್ರಯತ್ನಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಬುಧವಾರ ಹೊಸ ಅಂಗಣ ಪ್ರಕಾಶನದ 14 ನೇ ಕೃತಿ, ಸಂಪಾದಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ರಚಿತ “ಕೀರ್ತಿ ಶೇಷ ಮೂಲ್ಕಿಯ ಸಾಧಕರು” ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್ ಸ್ಥಾಪಕರು ಮೂಲ್ಕಿಯವರಾಗಿದ್ದು ದೇಶದ ಅಭಿವೃದ್ಧಿಯಲ್ಲಿ ಮೂಲ್ಕಿಯ ಕೊಡುಗೆ ಅಪಾರವಿದೆ. ಮೂಲ್ಕಿಯ ಮಹಾನ್ ಚೇತನಗಳ ಆದರ್ಶಗಳನ್ನು ಯುವ ಸಮಾಜ ಜೀವನದಲ್ಲಿ ಅಳವಡಿಸಿಕೊಂಡು ಆವರಂತೆಯೇ ಸಾಧನೆ ಮಾಡಲು ಪ್ರಯತ್ನಿಸಬೇಕೆಂದು ಅವರು ಕರೆ ನೀಡಿದರು.

ಕೃತಿ ಬಿಡುಗಡೆ: ಮೂಲ್ಕಿಯ ಹಿರಿಯ ವೈದ್ಯ ಡಾ.ಎಂ.ಎ.ಆರ್.ಅಚ್ಯುತ ಕುಡ್ವ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಉದ್ಯಮ, ಶಿಕ್ಷಣ, ಬ್ಯಾಂಕಿಂಗ್, ವೈದ್ಯಕೀಯ ಸೇರಿದಂತೆ ಹಲವಾರು ರಂಗಗಳಲ್ಲಿ ಮೂಲ್ಕಿಯ ಹಿರಿಯ ವ್ಯಕ್ತಿಗಳು ದೇಶ ವಿದೇಶಗಳಲ್ಲಿ ಸಾಧನೆ ಮಾಡಿ ಮೂಲ್ಕಿಯ ಹೆಸರನ್ನು ಎತ್ತರಕ್ಕೇರಿಸಿದ್ದಾರೆ. ಅವರು ಹಾಕಿ ಕೊಟ್ಟ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆಯೆಂದು ಹೇಳಿದರು.

ಚಿತ್ರಾಪು ವಿಠೋಭ ಬಾಲಲೀಲಾ ಭಜನಾ ಮಂದಿರ ಸಮಿತಿಯ ಅಧ್ಯಕ್ಷ ಎಚ್.ವಾಸು ಪೂಜಾರಿ ಚಿತ್ರಾಪು, ತೋಕೂರಿನ ಎಂ.ಆರ್. ಪೂಂಜ ಐಟಿಐನ ವಿಶ್ರಾಂತ ಪ್ರಾಚಾರ್ಯ ವೈ.ಎನ್.ಸಾಲ್ಯಾನ್, ಮೂಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷೆ ಸರೋಜಿನಿ ಸುವರ್ಣ ಮತ್ತಿತರಿದ್ದರು.

ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಸ್ವಾಗತಿಸಿದರು. ವಾಮನ್ ಕೋಟ್ಯಾನ್ ನಡಿಕುದ್ರು ವಂದಿಸಿದರು. ರವಿಚಂದ್ರ ನಿರೂಪಿಸಿದರು.