ಸ್ಚಚ್ಛ ಭಾರತ್ ಪರಿಕಲ್ಪನೆ ನಿತ್ಯ ನಿರಂತರವಾಗಬೇಕು-ಸಸಿಕಾಂತ್ ಸೆಂಥಿಲ್

ಮೂಲ್ಕಿ: ಸ್ವಚ್ಛ ಭಾರತ್ ಪರಿಕಲ್ಪನೆ ಸಾಕಾರಗೊಳ್ಳಲು ಪ್ರತಿಯೊಬ್ಬರೂ ನಿತ್ಯ ನಿರಂತರ ಸ್ವಚ್ಛತಾ ಅಭಿಯಾನ ನಡೆಸುತ್ತಿರಬೇಕು ಎಂದು ದಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಭಾನುವಾರ ಮೂಲ್ಕಿ ಶಾಂಭವಿ ಅಳಿವೆಯ ಹೆಜಮಾಡಿ ಭಾಗದ ಸಮುದ್ರ ತೀರದಲ್ಲಿ ಬೃಹತ್ ಬೀಚ್ ಕ್ಲೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ ಸೇವಾಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.

ಮೂಲ್ಕಿಯ ಮಂತ್ರ ಸರ್ಫ್ ಕ್ಲಬ್ ನೇತೃತ್ವದಲ್ಲಿ ಸರ್ಫಿಂಗ್ ಸ್ವಾಮಿ ಫೌಂಡೇಶನ್,ಮೂಡಬಿದಿರೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್‍ಎಸ್‍ಎಸ್,ಎನ್‍ಸಿಸಿ ಮತ್ತು ಸೃಷ್ಟಿ ಕ್ಲಬ್,ಮಂಗಳೂರಿನ ಮಣಿಪಾಲ್ ಡೆಂಟಲ್ ಕಾಲೇಜಿನ ವೆಲ್‍ನನ್ ಕ್ಲಬ್,ಮುಕ್ಕ ಶ್ರೀನಿವಾಸ ಕಾಲೇಜು,ಮೂಲ್ಕಿ ಮಹರ್ಷಿ ಶಾಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಮಂಗಳೂರು ಬೈಸಿಕಲ್ ಕ್ಲಬ್‍ನ ಸುಮಾರು 300ಕ್ಕೂ ಅಧಿಕ ಸದಸ್ಯರು ಮಂಗಳೂರು ಟೈಮ್ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬೆಂಗಳೂರು ಯಕ್ಷಿ ಕಮ್ಯುನಿಕೇಶನ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮೂಲ್ಕಿ ಶಾಂಭವಿ ಅಳಿವೆಯ ಉತ್ತರ ಭಾಗದ ಸರ್ಫಿಂಗ್ ವಲಯದಲ್ಲಿ ಬೃಹತ್ ಬೀಚ್ ಕ್ಲೀನ್ ಅಭಿಯಾನ ನಡೆಯಿತು.
ಅವಿಭಜಿತ ದಕ ಜಿಲ್ಲಾ ಇನ್‍ಕಮ್ ಟ್ಯಾಕ್ಸ್ ಜಾಯಿಂಟ್ ಕಮೀಶನರ್ ಸೌರಭ್ ದುಬೆ ಎರಡನೇ ಭಾರಿ ಬೀಚ್ ಕ್ಲೀನ್ ಅಭಿಯಾನದಲ್ಲಿ ಭಾಗವಹಿಸಿ ಸೇವಾಕರ್ತರನ್ನು ಹುರಿದುಂಬಿಸಿದರು.

ಶಾಂಭವಿ ಹೊಳೆಯ ತ್ಯಾಜ್ಯಗಳು ಅಳಿವೆಯ ಉತ್ತರ ಬಾಗದಲ್ಲಿ ಬೃಹತ್ ಪ್ರಮಾಣದಲ್ಲಿ ಶೇಖರಣೆಗೊಂಡಿತ್ತು.ತಿಂಗಳ ಹಿಂದೆ ಮಂತ್ರ ಸರ್ಫ್ ಕ್ಲಬ್ ವಿವಿಧ ಸಂಘಟನೆಗಳ ಜತೆಗೆ ಬೀಚ್ ಕ್ಲೀನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಪ್ರತಿ ತಿಂಗಳು ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ವಾಗ್ದಾನ ನೀಡಿತ್ತು.
ಭಾನುವಾರ ಬೀಚ್ ಬಳಿ ಪ್ಲಾಸ್ಟಿಕ್,ರಬ್ಬರ್ ಮತ್ತು ಗ್ಲಾಸ್ ಬಾಟಲಿ ಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಅದನ್ನು ಸ್ಥಳದಿಂದ ವಿಲೇವಾರಿ ಮಾಡುವ ಮೂಲಕ ಮಂತ್ರ ಸರ್ಫ್ ಕ್ಲಬ್ ಇತರರಿಗೆ ಮಾದರಿಯಾಗಿದೆ.

ತಿಂಗಳ ಹಿಂದೆ ಇಲ್ಲಿನ ಬೃಹತ್ ತ್ಯಾಜ್ಯಗಳ ಬಗ್ಗೆ ವರದಿ ಪ್ರಕಟಿಸಿದ್ದು,ಮಂತ್ರ ಸರ್ಫ್ ಕ್ಲಬ್ ಸರಕಾರಿ ಸಂಸ್ಥೆಗಳು ಮತ್ತು ಖಾಸಗಿಯವರ ಸಹಯೋಗದಲ್ಲಿ ಬೀಚ್ ಕ್ಲೀನ್ ಮಾಡುವುದಾಗಿ ಘೋಷಿಸಿತ್ತು.ಅದರಂತೆ ಭಾನುವಾರ 300ಕ್ಕೂ ಅಧಿಕ ಬ್ಯಾಗ್‍ಗಳಲ್ಲಿ ತ್ಯಾಜ್ಯಗಳನ್ನು ಸಂಗ್ರಹಿಸಿದ್ದು,ಮುಂದುವರಿದು ಮತ್ತೆ ಬೀಚ್ ಕ್ಲೀನ್ ಮಾಡುವುದಾಗಿ ಭರವಸೆ ನೀಡಿದೆ.

ಸರ್ಫಿಂಗ್ ಫೌಂಡೇಶನ್ ನಿರ್ದೇಶಕರುಗಳಾದ ಗೌರವ್ ಹೆಗ್ಡೆ,ಶ್ಯಾಮ್ ಮತ್ತು ಕಿರಣ್,ರಾಮ್‍ಮೋಹನ್ ಪರಾಂಜಪೆ,ಪನಂಬೂರು ಬೀಚ್ ಟೂರಿಸಮ್ ಡೆವಲಪ್‍ಮೆಂಟ್ ಪ್ರಾಜೆಕ್ಟ್‍ನ ಸಿಇಒ ಯತೀಶ್ ಬೈಕಂಪಾಡಿ,ಉದಯ ಶೆಟ್ಟಿ ಶಿಮಂತೂರು ಶಮಂತ್,ಶ್ರೇಯಸ್ ಮತ್ತಿತರರು ಉಪಸ್ಥಿತರಿದ್ದರು.