ಸಾಮಾಜಿಕ ಜವಾಬ್ದಾರಿಗೆ ನಾಯಕತ್ವ ತರಬೇತಿ ಅತ್ಯಗತ್ಯ-ವಿನಯಕುಮಾರ್ ಸೊರಕೆ

ಪಡುಬಿದ್ರಿ: ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರಂತರ ತರಬೇತಿಗಳನ್ನು ಪಡೆದುಕೊಳ್ಳುವುದು ಅತೀ ಅಗತ್ಯವಾಗಿದೆ.ಜೇಸಿಐ ಸಂಸ್ಥೆಗಳು ನೀಡುವ ನಾಯಕತ್ವ ತರಬೇತಿಯಿಂದ ಉತ್ತಮ ನಾಯಕರಾಗಲು ಸಾಧ್ಯವಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಎರ್ಮಾಳು ತೆಂಕ ರಾಜೀವಗಾಂಧಿ ನ್ಯಾಷನಲ್ ಅಕಾಡೆಮಿಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಮತ್ತು ಕಾಪು ಘಟಕದ ವತಿಯಿಂದ ನಡೆದ ನಾಯಕತ್ವ ತರಬೇತಿ ಶಿಬಿರ ಚೈತನ್ಯ-2019ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟುವಾಗಲೇ ಯಾರೂ ನಾಯಕರಾಗುವುದಿಲ್ಲ.ಆದರೆ ನಾಯಕತ್ವ ತರಬೇತಿಗಳಿಂದ ನಾಯಕತ್ವ ಗುಣಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದವರು ಹೇಳಿದರು.

ಸನ್ಮಾನ: ಇದೇ ಸಂದರ್ಭ ಸೇವಾದಳದ ಜಿಲ್ಲಾ ಅಧ್ಯಕ್ಷ ಅಶೋಕ್‍ಕುಮಾರ್ ಕೊಡವೂರುರವರನ್ನು ಯುವವಾಹಿನಿ ವತಿಯಿಂದ ಸನ್ಮಾನಿಸಲಾಯಿತು. ಯುವವಾಹಿನಿ ಕಾಪು ಘಟಕದ ಅಧ್ಯಕ್ಷ ದೀಪಕ್‍ಕುಮಾರ್ ಎರ್ಮಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.ಭಾರತೀಯ ಜೇಸೀಐನ ವಲಯ ತರಬೇತುದಾರ ನಾಗರಾಜ ಜಿಎಸ್ ನಾಯಕತ್ವ ತರಬೇತಿ ಶಿಬಿರ ನಡೆಸಿಕೊಟ್ಟರು.

ಜೇಸಿಐ ಫೌಂಡೇಶನ್ ನಿರ್ದೇಶಕ ವೈ.ಸುಕುಮಾರ್,ಯುವವಾಹಿನಿ ಕಾಪು ಘಟಕದ ಸಲಹೆಗಾರ ಕೆ.ವಿಶ್ವನಾಥ್,ವ್ಯಕ್ತಿತ್ವ ವಿಕಸನ ಕೇಂದ್ರ ಸಮಿತಿಯ ನಿರ್ದೇಶಕ ರಮೇಶ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.

ಸಮಾರೋಪ ಸಮಾರಂಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು ಅಧ್ಯಕ್ಷತೆ ವಹಿಸಿದ್ದು,ಕಾಪು ಬಿಲ್ಲವ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ದೀಪಕ್‍ಕುಮಾರ್ ಎರ್ಮಾಳು,ರಮೇಶ್ ಕುಮಾರ್,ಎರ್ಮಾಳು ನಾರಾಯಣ ಗುರು ಭಜನಾ ಮಂದಿರದ ಅಧ್ಯಕ್ಷ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.ಸುಧಾಕರ ಸಾಲ್ಯಾನ್ ವಂದಿಸಿದರು.