ಸಾಮಾಜಿಕ ಅಂತರ ಕಾಯ್ದುಕೊಳ್ಳದ ಬಸ್ ಪ್ರಯಾಣಿಕರು

ಪಡುಬಿದ್ರಿ: ವಿವಿಧ ಮಾರ್ಗಸೂಚಿಗಳನ್ನು ನಿಗದಿಪಡಿಸಿ ಸೋಮವಾರ ಆರಂಭಗೊಂಡ ಬಸ್ಸು ಸಂಚಾರದ ಮೊದಲ ದಿನವೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿ ಜನರನ್ನು ತುಂಬಿಸಿಕೊಂಡು ಪ್ರಯಾಣ ಬೆಳೆಸಿದ ಘಟನೆ ನಡೆದಿದೆ.

ಉಡುಪಿ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ವೇಗದೂತ ಖಾಸಗಿ ಬಸ್ಸೊಂದರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ 50ಕ್ಕೂ ಅಧಿಕ ಪ್ರಯಾಣಿಕರನ್ನು ಕರೆದೊಯ್ದ ಘಟನೆ ನಡೆದಿದ್ದು, ಹೆಜಮಾಡಿ ಚೆಕ್‍ಪೋಸ್ಟ್‍ನಲ್ಲಿ ಈ ಬಗ್ಗೆ ಪ್ರಶ್ನಿಸಿದವರಿಗೆ ಬಸ್ಸು ನಿರ್ವಾಹಕ ತನಗೇನೂ ಈ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆಯಿಂದ ವಿರಳ ಬಸ್ಸು ಸಂಚಾರ ಕಂಡು ಬಂದಿತ್ತು. ಹೆಚ್ಚಿನ ಬಸ್ಸುಗಳಲ್ಲಿ ಪ್ರಯಾಣಿಕರೇ ಇರಲಿಲ್ಲ. ಆದರೆ ವೇಗದೂತ ಬಸ್ಸಿನಲ್ಲಿ ತರಾತುರಿಯಲ್ಲಿ ಪ್ರಯಾಣಿಕರು ಯಾವುದೆ ಅಂಜಿಕೆಯಿಲ್ಲದೆ ಪ್ರಯಾಣಿಸಿದ್ದಾರೆ. ಬಸ್ಸಿನ ಎಲ್ಲಾ(3*2) ಸೀಟುಗಳು ಭರ್ತಿಯಾಗಿ ಕೆಲವರು ನಿಂತುಕೊಂಡೇ ಪ್ರಯಾಣ ಬೆಳೆಸಿದ್ದಾರೆ.