ಸಂಘಟನೆಗೆ ಪರ್ಯಾಯ ಪದ ಮೊಗವೀರರು-ಶಿರೂರು ಶ್ರೀ

ಸಂಘಟನೆಗೆ ಪರ್ಯಾಯ ಪದ ಮೊಗವೀರರು-ಶಿರೂರು ಶ್ರೀ

ಕರಾವಳಿ ಭಾಗದಲ್ಲಿ ಶ್ರಮದ ಜತೆಗೆ ದೇವರ ಧ್ಯಾನಗಳಲ್ಲಿ ತೊಡಗಿಸಿಕೊಂಡಿರುವ ಮೊಗವೀರರು ಇತರರಿಗೆ ಮಾದರಿ.ಸಂಘಟನೆಗೆ ಪರ್ಯಾಯ ಪದವೇ ಮೊಗವೀರರು.ಸಂಘಟನೆ ಮೂಲಕ ಸಬಲರಾಗಬಹುದು ಎಂದು ಸಮಾಜಕ್ಕೆ ತೋರಿಸಿಕೊಟ್ಟವರೇ ಅವರು ಎಂದು ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಹೇಳಿದರು.

ಹೆಜಮಾಡಿ ಸಣ್ಣಗುಂಡಿ ಮೊಗವೀರ ಸಭಾ ಆಡಳಿತದ ಗೀತಾಮಂದಿರದ ನೂತನ ಕಟ್ಟಡಕ್ಕೆ ಭಾನುವಾರ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚಿಸಿದರು.
ಉಡುಪಿ ಸಾಯಿರಾಧಾ ಗ್ರೂಪ್‍ನ ಆಡಳಿತ ನಿರ್ದೇಶಕ ಮನೋಹರ ಎಸ್.ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ,ಮಾನಸಿಕ ನೆಮ್ಮದಿಗೆ ಭಜನೆ,ಸತ್ಸಂಗ ಸೂಕ್ತವಾದುದು.ಭಜನೆ ಹಾಗೂ ಸತ್ಸಂಗ ನಡೆಯಲಿರುವ ಗೀತಾಮಂದಿರ ಆದಷ್ಟು ಶೀಘ್ರ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.

ಸನ್ಮಾನ:ಇದೇ ಸಂದರ್ಭ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಕಾಪು ಆರ್ಯನ್ ಕನ್‍ಸ್ಟ್ರಕ್ಷನ್‍ನ ಯೋಗೀಶ್ ಕಾಪುರವರನ್ನು ಸಣ್ಣಗುಂಡಿ ಮೊಗವೀರ ಸಭಾ ಮತ್ತು ಗೀತಾಮಂದಿರ ಜೀರ್ಣೋದ್ಧಾರ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ವೇದಮೂರ್ತಿ ರಂಗಣ್ಣ ಭಟ್ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿಗಳ ಮೂಲಕ ಶ್ರೀಗಳು ಗೀತಾಮಂದಿರ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಸಣ್ಣಗುಂಡಿ ಮೊಗವೀರ ಸಭಾ ಗುರಿಕಾರ ಗಂಗಾಧರ ಕೆ.ಕಾಂಚನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಹೆಜಮಾಡಿ ಕೋಡಿ ಬಿಲ್ಲವರ ಶ್ರೀ ವಿಠೋಭ ಭಜನಾ ಮಂದಿರದ ಉಪಾಧ್ಯಕ್ಷ ವೇಣುಗೋಪಾಲ್,ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್ ಪುತ್ರನ್,ಉಪಾಧ್ಯಕ್ಷ ಸುಧಾಕರ ಕರ್ಕೇರ,ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ,ತಾಪಂ ಸದಸ್ಯೆ ರೇಣುಕಾ ಪುತ್ರನ್,ದೋಗ್ರ ಪಟ್ಟೆಬಲೆ ಫಂಡ್‍ನ ಗಣೇಶ್ ಕೋಟ್ಯಾನ್,ಹೆಜಮಾಡಿ ಏಳೂರು ಮೊಗವೀರ ಸಭಾ ಅಧ್ಯಕ್ಷ ವಿಜಯ ಕೋಟ್ಯಾನ್,ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭಾ ಅಧ್ಯಕ್ಷ ಗುರುವಪ್ಪ ಕೋಟ್ಯಾನ್,ಸಣ್ಣಗುಂಡಿ ಮೊಗವೀರ ಸಭಾ ಅಧ್ಯಕ್ಷ ವಿಠಲ ಜಿ.ಪುತ್ರನ್,ಮಹಿಳಾ ಸಭಾ ಅಧ್ಯಕ್ಷೆ ಜಯಶ್ರೀ ಕಾಂಚನ್,ಗೀತಾಮಂದಿರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೇಮಾನಂದ ಕೆ.ಪುತ್ರನ್ ಮುಖ್ಯ ಅತಿಥಿಗಳಾಗಿದ್ದರು.
ಅರ್ಚಕ ವೇದಮೂರ್ತಿ ಹರಿದಾಸ ಭಟ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.ಗಾಯತ್ರಿ ಏಕನಾಥ ಕರ್ಕೇರ ವಂದಿಸಿದರು.