ಸಂಕಲ್ಪ ಶುದ್ಧಿಯಿದ್ದರೆ ಎಲ್ಲಾ ಕೈಂಕರ್ಯಗಳು ಸುಗಮ-ವಿ.ಜಿ.ಶೆಟ್ಟಿ

ಪಡುಬಿದ್ರಿ ಸಂಕಲ್ಪಗಳು ಶುದ್ಧವಾಗಿದ್ದಾಗ ನಾವು ಕೈಗೊಳ್ಳುವ ಎಲ್ಲಾ ಕೈಂಕರ್ಯಗಳು ಸುಗಮವಾಗಿ ಸಾಗುತ್ತದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ವಿ.ಜಿ.ಶಟ್ಟಿ ಹೇಳಿದರು.

ಗುರುವಾರ ರಾತ್ರಿ ಪಡುಬಿದ್ರಿ ಲಯನ್ಸ್ ಕ್ಲಬ್‍ಗೆ ಅಧಿಕೃತ ಭೇಟಿ ಮತ್ತು ಸನದು ಪ್ರದಾನ ಕಾರ್ಯಕ್ರಮವು ಪಡುಬಿದ್ರಿಯ ಸಹಕಾರ ಸೌಧದಲ್ಲಿ ನಡೆದ ಸಂದರ್ಭ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿದರು.

ಆಚಾರ ವಿಚಾರಗಳ ಪರಿಪಕ್ವತೆಗೆ ಲಯನ್ಸ್‍ನಂತಹ ಸಂಸ್ಥೆಗಳ ಒಡನಾಟ ಉಪಯುಕ್ತವಾಗುತ್ತದೆ ಎಂದ ಅವರು ಜಗತ್ತಿನಾದ್ಯಂತ ಸೇವಾ ಕೈಂಕರ್ಯದಲ್ಲಿ ಲಯನ್ಸ್ ತೊಡಗಿಸಿಕೊಂಡಿದ್ದು ಭಾರತದಲ್ಲಿ ಈ ಬಾರಿ 7.20 ಲಕ್ಷ ಡಯಾಲಿಸಿಸ್ ಕೇಂದ್ರಗಳ ಮೂಲಕ ಉಚಿತ ಸೇವೆಯಲ್ಲಿ ತೊಡಗಿಸಿಕೊಂಡಿದೆ. ನಮ್ಮನ್ನು ನಾವೇ ಹಾರ ತುರಾಯಿ ಸನ್ಮಾನಗಳಿಗಿಂತ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕಾರ್ಯಕ್ರಮ ನಡೆಸಿ ಜನಮನ್ನಣೆ ಗಳಿಸಿಕೊಳ್ಳಬೇಕು ಎಂದವರು ಅಭಿಪ್ರಾಯಿಸಿದರು.

ಸಮಾಜ ನಮ್ಮಿಂದ ಹೆಚ್ಚು ನಿರೀಕ್ಷೆಯಲ್ಲಿದೆ. ಅದಕ್ಕೆ ಸೂಕ್ತವಾಗಿ ಸ್ಪಂದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದವರು ಹೇಳಿದರು.

ಸನ್ಮಾನ: ಪಡುಬಿದ್ರಿ ಲಯನ್ಸ್ ಶಿಕ್ಷಣ ಟ್ರಸ್ಟ್ ನಿರ್ವಹಿಸುತ್ತಿರುವ ಲಯನ್ಸ್ ಶಾಲಾ ವಿದ್ಯಾರ್ಥಿಯಾಗಿದ್ದು, ಈ ಬಾರಿ ಸಿಎ ಪರೀಕ್ಷೆಯಲ್ಲಿ ದೇಶಕ್ಕೆ 35ನೇ ರ್ಯಾಂಕ್ ಗಳಿಸಿದ ಪಡುಬಿದ್ರಿ ಬೇಂಗ್ರೆಯ ಶ್ರೀಕಾಂತ್‍ರವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. 36 ವರ್ಷಗಳ ಇತಿಹಾಸದ ಪಡುಬಿದ್ರಿ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯರಾಗಿರುವ ಪಿ.ರವೀಂದ್ರನಾಥ ಜಿ.ಹೆಗ್ಡೆ, ಡಾ.ಎನ್.ಟಿ.ಅಂಚನ್, ಪಿ.ಎಸ್.ಆಚಾರ್, ವೈ.ದಾಮೋದರ್, ಅನಿಲ್ ಕುಮಾರ್ ಶೆಟ್ಟಿ, ವೈ.ಶಶಿಧರ್ ಶೆಟ್ಟಿಯವರನ್ನು ಗೌರವಿಸಲಾಯಿತು. ಇದೇ ಸಂದರ್ಭ ಆರ್ಥಿಕ ದುಸ್ಥಿತಿಯ ಲಲಿತಾ ಶೆಟ್ಟಿಯವರಿಗೆ ಧನಸಹಾಯ ವಿತರಿಸಲಾಯಿತು. ಇದೇ ಸಂದರ್ಭ ಲಯನ್ಸ್ ಸಂಸ್ಥೆಗೆ ಸಲ್ಲಿಸಿದ ಸೇವೆಗಾಗಿ ಪಡುಬಿದ್ರಿ ಲಯನ್ಸ್ ಸದಸ್ಯರಿಗೆ ವಿ.ಜಿ.ಶೆಟ್ಟಿ ಅಂತರಾಷ್ಟ್ರೀಯ ಗೌರವ ಸಲ್ಲಿಸಿದರು.

ಪಡುಬಿದ್ರಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮಣ ಡಿ.ಪೂಜಾರಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಲಯನ್ಸ್ ಪ್ರಥಮ ಮಹಿಳೆ ವಿಲಾಸ ವಿ.ಶೆಟ್ಟಿ, ಲಯನ್ಸ್ ವಲಯಾಧ್ಯಕ್ಷ ಮಿಥುನ್ ಆರ್.ಹೆಗ್ಡೆ, ಸಂಪುಟ ಕಾರ್ಯದರ್ಶಿ ಜಾರ್ಜ್ ಸ್ಯಾಮುವೆಲ್, ಪ್ರಾಂತೀಯ ಅಧ್ಯಕ್ಷ ಜೆರಾಲ್ಡ್ ಫೆರ್ನಾಂಡೀಸ್, ಪಡುಬಿದ್ರಿ ಲಯನ್ಸ್ ಕೋಶಾಧಿಕಾರಿ ಪಿ.ಸದಾಶಿವ ಆಚಾರ್ ಮುಖ್ಯ ಅತಿಥಿಗಳಾಗಿದ್ದರು.

ಸುಧಾ ನಾವಡ ಮತ್ತು ಭಾರ್ಗವಿ ಆಚಾರ್ ಪ್ರಾರ್ಥಿಸಿದರು. ವೈ.ದಾಮೋದರ್ ಧ್ವಜವಂದನೆಗೈದರು. ಪೂರ್ವಾಧ್ಯಕ್ಷ ವೈ.ಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಕಪಿಲ್ ಕುಮಾರ್ ವರದಿ ಮಂಡಿಸಿ ವಂದಿಸಿದರು.
ಕಾರ್ಯಕ್ರಮ ಪ್ರಾಯೋಜಕರಾದ ಜೇಮ್ಸ್ ಡಯಾನ್ ಅಂದ್ರಾದೆ, ಜಿತೇಂದ್ರ ಫುರ್ಟಾಡೋ, ನವೀನ್‍ಚಂದ್ರ ಸುವರ್ಣ ಅಡ್ವೆ, ಅನಿಲ್ ಕುಮಾರ್ ಶೆಟ್ಟಿ, ರವಿ ಕೆ.ಸಾಲಿಯಾನ್, ಶರತ್ ಶೆಟ್ಟಿ, ಸಂಪತ್ ಕುಮಾರ್‍ರವರನ್ನು ಗೌರವಿಸಲಾಯಿತು.