ವಿಶೇಷ ಚೇತನರಿಗೆ ಬಲ ನೀಡಲು ಸರಕಾರ ವಿಶೇಷ ಮುತುವರ್ಜಿ-ಶಾಸಕ ಲಾಲಾಜಿ ಆರ್.ಮೆಂಡನ್

ಪಡುಬಿದ್ರಿ: ವಿಶೇಷ ಚೇತನರಿಗೆ ಬಲ ನೀಡಲು ರಾಜ್ಯ ಸರಕಾರ ವಿಶೇಷ ಮುತುವರ್ಜಿ ವಹಿಸಿದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಹೆಜಮಾಡಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಭಾನುವಾರ ಉಡುಪಿ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಜನ ಮಂಗಲ ಯೋಜನೆಯಡಿ ವಿಶೇಷ ಚೇತನರಿಗೆ ಸಲಕರಣೆ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಸವಲತ್ತುಗಳನ್ನು ವಿತರಿಸಿ ಮೆಂಡನ್ ಮಾತನಾಡಿದರು.
ಸ್ವ-ಸಹಾಯ ಸಂಘಗಳಿಂದ ಅವಿಭಜಿತ ದಕ ಜಿಲ್ಲೆಗೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಮಹಿಳಾ ಸಬಲೀಕರಣಕ್ಕೆ ಯೋಜನೆಯ ಕೊಡುಗೆ ಅಪಾರವಾದುದು. ಸ್ವಯಂ ರಾಹುಲ್ ಗಾಂಧಿಯವರೇ ಧರ್ಮಸ್ಥಳಕ್ಕೆ ಬಂದು ಯೋಜನೆಯ ವಿಸ್ತøತ ವರದಿ ಪಡೆದು ತನ್ನ ಸ್ವ ಕ್ಷೇತ್ರದಲ್ಲಿ ಅಳವಡಿಸಿಕೊಂಡಿದ್ದರು ಎಂದು ಮೆಂಡನ್ ಹೇಳಿದರು.

ಫೆಬ್ರವರಿಯಲ್ಲಿ ಜಾರಿಗೆ ಬಂದ ಜನ ಮಂಗಲ ಕಾರ್ಯಕ್ರಮದಡಿ ಉಡುಪು ತಾಲೂಕಿನಾದ್ಯಂತ 18 ಮಂದಿಗೆ ವೀಲ್ ಚೇರ್ ಮತ್ತು ವಾಟರ್ ಬೆಡ್ ನೀಡಲು ಟ್ರಸ್ಟ್ ನಿರ್ಧರಿಸಿದ್ದು, ಹೆಜಮಾಡಿಯ ಕಾರ್ಯಕ್ರಮದಲ್ಲಿ ಪಡುಬಿದ್ರಿ ಮತ್ತು ಹೆಜಮಾಡಿಯ 6 ಫಲಾನುಭವಿಗಳಿಗೆ ವೀಲ್‍ಚೇರ್ ಮತ್ತು ವಾಟರ್ ಬೆಡ್‍ಗಳನ್ನು ವಿತರಿಸಲಾಯಿತು.

ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಯು.ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ, ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ರೋಹಿತ್ ಎಚ್., ಹೆಜಮಾಡಿ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಅಧ್ಯಕ್ಷರುಗಳಾದ ಅಶೋಕ್ ವಿಕೆ ಮತ್ತು ಸಂಧ್ಯಾ, ಸೇವಾ ಪ್ರತಿನಿಧಿಗಳಾದ ತಾರಾವತಿ ಮತ್ತು ರಾಜೇಶ್ವರೀ ಮುಖ್ಯ ಅತಿಥಿಗಳಾಗಿದ್ದರು.

ಬಿ.ಸಿ.ಟ್ರಸ್ಟ್ ಪಡುಬಿದ್ರಿ ವಲಯದ ಮೇಲ್ವಿಚಾರಕ ಕೆ.ರತ್ನಾಕರ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು. ಅಶೋಕ್ ವಿ.ಕೆ. ಸ್ವಾಗತಿಸಿದರು. ಪವಿತ್ರಾ ಗಿರೀಶ್ ವಂದಿಸಿದರು.