ಲಾಕ್‍ಡೌನ್ ಇಫೆಕ್ಟ್: ಹಣ್ಣು ವ್ಯಾಪಾರದಲ್ಲಿ ರಿಕ್ಷಾ ಚಾಲಕ

ಪಡುಬಿದ್ರಿ: ಲಾಕ್‍ಡೌನ್‍ನಿಂದ ರಿಕ್ಷಾ ಚಾಲಕರು ಸಹಿತ ಹಲವು ಮಂದಿ ತಮ್ಮ ತಮ್ಮ ವ್ಯಾಪಾರಗಳು ಇಲ್ಲದೆ ಕಂಗಾಲಾಗಿದ್ದಾರೆ. ಆದರೆ ಪಡುಬಿದ್ರಿ ಮಸೀದಿ ಬಳಿಯ ಕೇರಿ ನಿವಾಸಿ ಎಂ.ಎಚ್.ಹುಸೈನ್ ತನ್ನ ರಿಕ್ಷಾದಲ್ಲಿ ಮನೆ ಮನೆಗೆ ತೆರಳಿ ಹಣ್ಣು ಹಂಪಲುಗಳ ವ್ಯಾಪಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಉಚ್ಚಿಲ, ಮೂಳೂರು, ಪಡುಬಿದ್ರಿ, ಹೆಜಮಾಡಿ ಮುಂತಾದ ಪ್ರದೇಶಗಳಿಗೆ ಮನೆ ಮನೆಗೆ ತೆರಳಿ ವ್ಯಾಪಾರವನ್ನು ಮಾಡುವ ಇವರು ಬೆಳಗ್ಗೆ ಉಡುಪಿಯಿಂದ ಹಣ್ಣು ಹಂಪಲುಗಳನ್ನು ರಖಂ ಖರೀದಿಸಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವ್ಯಾಪಾರ ನಡೆಸುತ್ತಾರೆ.

ತಾನು ವ್ಯಾಪಾರ ಮಾಡುವ ಸ್ಥಳಗಳಿಗೆ ವಾರಕ್ಕೆ ಎರಡು ಅಥವಾ ಮೂರು ಬಾರಿ ತೆರಳಿ ಗ್ರಾಹಕರಿಗೆ ಎರಡು ಮೂರು ದಿನಕ್ಕೆ ಬೇಕಾಗುಷ್ಟು ಹಣ್ಣು, ಹಂಪಲುಗಳನ್ನು ಪಡೆದುಕೊಳ್ಳುತ್ತಾರೆ. ಗ್ರಾಹಕರು ಇವರ ಬರುವಿಕೆಯನ್ನೇ ಕಾಯುತ್ತಾರೆ.

ಲಾಕ್‍ಡೌನ್‍ನಿಂದ ರಿಕ್ಷಾ ಮನೆಯಲ್ಲಿ ಇಡಬೇಕಾದ ಪರಿಸ್ಥಿತಿ ಉಂಟಾಯಿತು. ಇದರಿಂದ ಕುಟುಂಬ ನಿರ್ವಹಣೆ ಮಾಡುವುದು ಎಂದು ಚಿಂತಿಸತೊಡಗಿದೆ. ರಿಕ್ಷಾದಲ್ಲಿಯೇ ಹಣ್ಣು ವ್ಯಾಪಾರ ಮಾಡುವ ಬಗ್ಗೆ ಆಲೋಚಿಸಿದೆ. ಅಲ್ಪ ಬಂಡವಾಳದಲ್ಲಿ ಅಲ್ಪಸ್ವಲ್ಪ ಹಣ್ಣುಗಳನ್ನು ಉಡುಪಿಯಿಂದ ಖರೀದಿಸಿ ಮನೆ ಮನೆಗೆ ತೆರೆಳಿದೆ. ಅಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದೀಗ ಜನರು ಅದಕ್ಕೆ ಹೊಂದಿಕೊಂಡಿದ್ದಾರೆ. ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳನ್ನು ಕನಿಷ್ಟ ಬೆಲೆಯಲ್ಲಿ ನೀಡುತಿದ್ದೇನೆ. ಅಲ್ಲದೆ ಜನರ ಬೇಡಿಕೆಯಂತೆ ಅವರಿಗೆ ಬೇಕಾದ ಹಣ್ಣುಗಳನ್ನು ನಾನು ಅವರಿಗೆ ಮನೆಗೆ ತಲುಪಿಸುತ್ತೇನೆ. ಈಗ ರಂಝಾನ್ ಆಗಿರುವುದರಿಂದ ಹಣ್ಣುಗಳ ವ್ಯಾಪಾರಕ್ಕೆ ಒಳ್ಳೆಯ ಬೇಡಿಕೆ ಇದೆ ಎನ್ನುತ್ತಾರೆ ಎಂ.ಎಚ್. ಹುಸೈನ್.