ಮೂಲ್ಕಿ ಹೋಬಳಿಯಲ್ಲಿ 3 ವರ್ಷದ ಮಗು ಸೇರಿ 7 ಮಂದಿಗೆ ಕೊರೊನಾ ಪಾಸಿಟಿವ್

ಮೂಲ್ಕಿ: ಹೋಬಳಿಯ ಮೂಲ್ಕಿ, ಹಳೆಯಂಗಡಿ ಮತ್ತು ಮೆನ್ನಬೆಟ್ಟು, ಗೋಳಿಜೋರಾ ಗ್ರಾಮಗಳಲ್ಲಿ ಭಾನುವಾರ 3 ವರ್ಷದ ಮಗು ಸೇರಿ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಮೂಲ್ಕಿ ಹೋಬಳಿಯ ಕಿನ್ನಿಗೋಳಿ ಸಮೀಪದ ಮೆನ್ನಬೆಟ್ಟು ಗ್ರಾಮದ ಒಂದೇ ಕುಟುಂಬದ 4 ಮಂದಿಗೆ ಭಾನುವಾರ ಸೋಂಕು ದೃಢಪಟ್ಟಿದ್ದು ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲವು ದಿನಗಳ ಹಿಂದೆ ಮೆನ್ನಬೆಟ್ಟು ಗ್ರಾಮದ ವಸತಿ ಸಂಕೀರ್ಣದ ವಾಸಿ 61 ವರ್ಷ ಪ್ರಾಯದ ವ್ಯಕ್ತಿಗೆ ಸೋಂಕು ದೃಢಪಟ್ಟಿತ್ತು. ಅವರ ಸಂಪರ್ಕದಿಂದ ಅವರ 55 ವರ್ಷದ ಪತ್ನಿ, 31 ವರ್ಷದ ಮಗ, 19 ವರ್ಷದ ಮಗ, 12 ವರ್ಷದ ಮಗಳಿಗೆ ಗಂಟಲು ಸ್ರಾವ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ.

ಮೂಲ್ಕಿ ನಗರ ವ್ಯಾಪ್ತಿಯ ಕೆಎಸ್ ರಾವ್ ನಗರದ ಸೋಂಕಿತ ಗರ್ಭಿಣಿ ಮಹಿಳೆಯ ಸಂಪರ್ಕದಿಂದ ಅವರ 42 ವರ್ಷದ ತಾಯಿಗೆ ಭಾನುವಾರ ಸೋಂಕು ದೃಢಪಟ್ಟಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಸಂತೆಕಟ್ಟೆ ಬಳಿ 72 ವರ್ಷದ ವ್ಯಕ್ತಿಗೆ ಹಾಗೂ ಕಿನ್ನಿಗೋಳಿ ಸಮೀಪದ ಗೋಳಿಜೋರಾ ಎಂಬಲ್ಲಿ 3 ವರ್ಷದ ಮಗುವಿಗೆ ಗಂಟಲು ಸ್ರಾವ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದ್ದು ಅವರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.