ಮೂಲ್ಕಿ ಹೆದ್ದಾರಿ ಡಿವೈಡರ್ -ಅಪಘಾತಗಳಿಗೆ ರಹದಾರಿ

— ಎಚ್ಕೆ ಹೆಜ್ಮಾಡಿ, ಮೂಲ್ಕಿ

ರಾಹೆ 66ರ ಮೂಲ್ಕಿಯ ಮುಖ್ಯ ಪೇಟೆ ಹಾದುಹೋಗುವಲ್ಲಿ ಸಾರ್ವಜನಿಕರ ಬೇಡಿಕೆ ಮೇರೆಗೆ 500 ಮೀಟರ್ ಅಂತರದಲ್ಲಿ 3 ಡಿವೈಡರ್‍ಗಳನ್ನು ಅಳವಡಿಸಿದ್ದು, ನೂರಾರು ಅಪಘಾತಗಳಿಗೆ ಕಾರಣವಾಗಿದೆ.

ಮೂಲ್ಕಿ ವಿಜಯಾ ಸನ್ನಿಧಿ ಬಳಿ, ಆದಿಧನ್ ಬಳಿ ಮತ್ತು ಬಪ್ಪನಾಡಿ ದೇವಳ ಬಳಿ ಅವೈಜ್ಞಾನಿಕವಾಗಿ ರಸ್ತೆ ಡಿವೈಡರ್ ನಿರ್ಮಿಸಿದ್ದು, ವಾಹನ ಸವಾರರು ಬೇಕಾಬಿಟ್ಟಿ ಡಿವೈಡರ್ ಬಳಸಿ ಸಂಚರಿಸುವ ಪರಿಣಾಮ ಹಲವು ಮಾರಣಾಂತಿಕ ಅಪಘಾತಗಳು ಸಂಭವಿಸಿದೆ.
ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಹೆದ್ದಾರಿ ಇಲಾಖೆ ಮತ್ತು ಟ್ರಾಫಿಕ್ ಪೋಲಿಸರಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಅಪಘಾತಗಳು ಸಂಭವಿಸುತ್ತಲೇ ಇದೆ.

ಈ ಹಿಂದೆ ಟ್ರಾಫಿಕ್ ನಿರೀಕ್ಷಕರಾಗಿದ್ದ ಮಂಜುನಾಥ್‍ರವರು ಇಲ್ಲಿನ ಸಮಸ್ಯೆಯನ್ನು ಮನಗಂಡು 3ಕ್ಕೂ ಅಧಿಕ ಬಾರಿ ಸಾರ್ವಜನಿಕ ಸಭೆ ಕರೆದು ಅಪಘಾತ ತಡೆಗೆ ಏನು ಮಾಡಬಹುದೆಂದು ಚರ್ಚಿಸಿದ್ದರು. ಹೆದ್ದಾರಿ ಇಲಾಖೆ ಮತ್ತು ಹೆದ್ದಾರಿ ಗುತ್ತಿಗೆ ಕಂಪನಿ ನವಯುಗ್ ಅಧಿಕಾರಿಗಳೂ ಆಗಮಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವ ಭರವಸೆ ನೀಡಿದ್ದರು. ಆದರೆ ಸಭೆಯ ಯಾವುದೇ ನಿರ್ಣಯಗಳನ್ನು ನವಯುಗ್ ಜಾರಿಗೆ ತಾರದ ಪರಿಣಾಮ ನಿರಂತರ ಅಪಘಾತಗಳು ಸಂಭವಿಸುತ್ತಲೇ ಇದೆ.

ಬಸ್ಸು ನಿಲ್ದಾಣ ಬಳಿ ಅತಿ ಅಪಾಯಕಾರಿ: ನಾಲ್ಕು ರಸ್ತೆಗಳು ಒಂದಾಗುವ ಮೂಲ್ಕಿ ಬಸ್ಸು ನಿಲ್ದಾಣ(ಆದಿಧನ್ ಹೋಟೆಲ್ ಮುಂಭಾಗ) ಅತೀ ಅಪಾಯಕಾರಿ ಡಿವೈಡರ್ ಹೊಂದಿದ ಪ್ರದೇಶ. ಇಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇದೆ. ಆದರೆ ಮಾರಣಾಂತಿಕ ಅಪಘಾತಗಳು ಮಾತ್ರ ಸುದ್ದಿಯಾಗುತ್ತದೆ. ಮಂಗಳೂರು ಕಡೆಯಿಂದ ಬರುವಲ್ಲಿ ಇಳಿಜಾರು ಪ್ರದೇಶವಾದ ಕಾರಣ ವಾನಗಳು ಅತೀ ವೇಗದಿಂದ ಬರುತ್ತದೆ. ವಿಭಾಜಕ ಬಳಿ ರಸ್ತೆಗೆ ಅಡ್ಡ ಬರುವ ವಾಹನಗಳನ್ನು ಕಂಡು ತಕ್ಷಣ ಬ್ರೇಕ್ ಹಾಕಿದರೂ ಪ್ರಯೋಜನವಾಗದೆ ಮುಂದಕ್ಕೆ ಚಲಿಸಿಕೊಂಡು ಬಂದು ಅಪಘಾತಗಳು ಸಂಭವಿಸುತ್ತದೆ. ಇಲ್ಲಿ ವಿಭಾಜಕವು ನಿಯಮ ಪ್ರಕಾರ ನಿರ್ಮಿಸದೆ ಅತೀ ಕಡಿಮೆ ಅಗಲದಲ್ಲಿ ನಿರ್ಮಿಸಿದ ಪರಿಣಾಮ ದ್ವಿಚಕ್ರ ವಾಹನಗಳಿಗೂ ಅತಿ ಅಪಾಯಕಾರಿಯಾಗಿದೆ. ಹೆಚ್ಚಿನ ಮಾರಣಾಂತಿಕ ಅಪಘಾತಗಳಲ್ಲಿ ಬಲಿಯಾದವರು ದ್ವಿಚಕ್ರ ವಾಹನ ಸವಾರರು.

ಇಲ್ಲಿನ ಡಿವೈಡರ್ ಮುಚ್ಚಿ 100 ಮೀಟರ್ ದೂರದ ಆರ್‍ಆರ್ ಟವರ್ ಬಳಿ ವಿಭಾಜಕ ನಿರ್ಮಿಸಲು ಸಾರ್ವಜನಿಕರು ನಿರ್ಧರಿಸಿ ಇಲಾಖೆಗೆ ಮಾಹಿತಿ ನೀಡಿದ್ದರೂ ನವಯುಗ್ ಸ್ಪಂದಿಸಿಲ್ಲ.

ತಾತ್ಕಾಲಿಕ ಡಿವೈಡರ್( ಸಿಮೆಂಟ್ ಸ್ಲ್ಯಾಬ್ ಬಳಸಿ ಬೇಕಾದ ಸಂದರ್ಭ ಉಪಯೋಗಿಸುವಂತೆ) ನಿರ್ಮಿಸುವಂತೆಯೂ ಸಾರ್ವಜನಿಕರು ಆಗ್ರಹಿಸಿದ್ದರು.

ಬಪ್ಪನಾಡು ವಿಭಾಜಕವೂ ಅಪಾಯಕಾರಿ: ಇಲ್ಲಿಯೂ ನಾಲ್ಕು ರಸ್ತೆಗಳು ಒಂದುಗೂಡುತ್ತದೆ. ನಾಲ್ಕೂ ಕಡೆಯಿಂದ ವಾಹನ ಬರುವ ಸಂದರ್ಭ ಅತೀ ಹೆಚ್ಚು ಅಪಘಾತಗಳು ನಡೆದಿವೆ. ಇಲ್ಲೂ ಹಲವಾರು ಮಾರಣಾಂತಿಕ ಅಪಘಾತಗಳೆ ಸಂಭವಿಸಿದೆ. ಉಡುಪಿ ಕಡೆಯಿಂದ ಅತೀ ವೇಗದಲ್ಲಿ ಬರುವ ವಾಹನಗಳು ನಿತ್ಯ ಇಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‍ಗಳನ್ನು ಬೀಳಿಸಿ ಮುಂದುವರಿಯುತ್ತದೆ.
ಸರ್ವಿಸ್ ರಸ್ತೆ ನಿರ್ಮಾಣವಾಗದೆ ಸಮಸ್ಯೆ: ಹೆದ್ದಾರಿ ಕಾಮಗಾರಿ ಮುಗಿದಿದ್ದರೂ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ.ಪಶ್ಚಿಮ ಭಾಗದಲ್ಲಿ ಸರ್ವಿಸ್ ರಸ್ತೆ ನಿರ್ಮಿಸದ ಕಾರಣ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದೆ. ಸರ್ವಿಸ್ ರಸ್ತೆ ಕಾಮಗಾರಿ ಬಪ್ಪನಾಡು ದೇವಳವರೆಗೆ ನಡೆದ ಬಳಿಕ ಅಪಘಾತಗಳಿಗೆ ಕಾರಣವಾದ ಡಿವೈಡರ್‍ಗಳನ್ನು ಮುಚ್ಚಬಹುದಾಗಿದೆ.

ಮೂಲ್ಕಿ ಬಸ್ಸು ನಿಲ್ದಾಣ ಬಳಿ ನಾಲ್ಕೂ ಕಡೆಯಿಂದ ವಾಹನಗಳು ನಾಲ್ಕೂ ಕಡೆ ಬೇಕಾಬಿಟ್ಟಿ ಸಂಚರಿಸುತ್ತದೆ. ಇಲ್ಲಿ ಸರ್ವಿಸ್ ರಸ್ತೆಗಳಿಗೂ ಡಿವೈಡರ್ ಅಳವಡಿಸಿದ್ದೇ ಅಪಘಾತಗಳಿಗೆ ಮೂಲ ಕಾರಣವಾಗಿದೆ. ಕನಿಷ್ಟ ಸರ್ವಿಸ್ ರಸ್ತೆ ಡಿವೈಡರ್ ಮುಚ್ಚುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಸ್ತೆ ಅಗಲ ತೀರಾ ಕಡಿಮೆ: ಹೆದ್ದಾರಿ ಕಾಮಗಾರಿ ಸಂದರ್ಭ ಬೇರೆಲ್ಲಾ ಕಡೆಗಳಿಗಿಂತ ಇಲ್ಲಿ ಮುಖ್ಯ ಹೆದ್ದಾರಿ ಅಗಲ ಕಿರಿದಾಗಿ ನಿರ್ಮಿಸಲಾಗಿದೆ. ಎರಡೂ ಕಡೆಯ ವಾಣಿಜ್ಯ ಕಟ್ಟಡಗಳನ್ನು ಉಳಿಸುವ ನಿಟ್ಟಿನಲ್ಲಿ ರಸ್ತೆ ಮಾತ್ರವಲ್ಲ ಡಿವೈಡರ್ ಅಗಲವನ್ನೂ ಕಿರಿದುಗೊಳಿಸಲಾಗಿದೆ. ಇದೂ ಅಪಘಾತಗಳಿಗೆ ಕಾರಣ ಎಂದು ಹಿರಿಯ ನಾಗರಿಕರೊಬ್ಬರ ಅಭಿಮತ.
ಸರ್ವಿಸ್ ಬಸ್ಸು ಸಹಿತ ಎಲ್ಲಾ ವಾಹನಗಳು ಸಾರಿಗೆ ನಿಯಮ ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಡಿವೈಡರ್ ಬಳಸಿ ಸಂಚರಿಸುತ್ತಿದ್ದು, ಅಪಘಾತಗಳಿಗೆ ಮೂಲ ಕಾರಣ. ಈ ಬಗ್ಗೆಯೂ ಸಾರ್ವಜನಿಕರಿಗೆ ತಿಳುವಳಿಕೆಯ ಅಗತ್ಯವಿದೆ.

ಅನಿಸಿಕೆ:
ಹೆದ್ದಾರಿಯಲ್ಲಿ ಅಪಘಾತಗಳಿಗೆ ಕಾರಣವಾಗುವ ಹಲವು ಡಿವೈಡರ್‍ಗಳನ್ನು ಸಾರ್ವಜನಿಕರ ನೆರವಿನಿಂದ ಗುರುತಿಸಲಾಗಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಮತ್ತು ಆರ್‍ಟಿಒಗಳಿಗೆ ವೈಜ್ಞಾನಿಕ ತನಿಖೆ ನಡೆಸಿ ಅನಗತ್ಯ ಹಾಗೂ ಅಪಾಯಕಾರಿ ಡಿವೈಡರ್‍ಗಳನ್ನು ಮುಚ್ಚುವಂತೆ ಲಿಖಿತವಾಗಿ ಮನವಿ ಮಾಡಲಾಗಿದೆ.
-ಮೋಹನ್ ಕೊಟ್ಟಾರಿ, ನಿರೀಕ್ಷಕರು, ಸುರತ್ಕಲ್ ಉತ್ತರ ಸಂಚಾರಿ ಪೋಲಿಸ್ ಠಾಣೆ.

ಆರ್‍ಆರ್ ಟವರ್ ಬಳಿಗೆ ರಸ್ತೆ ವಿಭಾಜಕ ಸ್ಥಳಾಂತರಿಸಲು ಸಂಸದರಿದ್ದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಇಲಾಖೆ ಅಥವಾ ನವಯುಗ್ ಕಂಪನಿ ಈವರೆಗೂ ಅಪಾಯಕಾರಿ ಡಿವೈಡರ್ ಮುಚ್ಚಿಲ್ಲ.
-ಉದಯ ಶೆಟ್ಟಿ, ಹೋಟೆಲ್ ಆದಿಧನ್.

ಸರ್ವಿಸ್ ರಸ್ತೆಯ ಡಿವೈಡರ್ ಮುಚ್ಚಲೇಬೇಕು. ಸರ್ವಿಸ್ ಬಸ್ಸುಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಮೂಲ್ಕಿ ಬಸ್ಸು ನಿಲ್ದಾಣಕ್ಕೆ ಬಾರದೆ ಸರ್ವಿಸ್ ರಸ್ತೆಯಲ್ಲೆ ನಿಲ್ಲುವಂತೆ ವ್ಯವಸ್ಥೆ ಕಲ್ಪಿಸಬೇಕು.
-ಶಶಿಕಾಂತ್ ಶೆಟ್ಟಿ, ಮೂಲ್ಕಿ ನಪಂ ಮಾಜಿ ಅಧ್ಯಕ್ಷರು.

ಇಲ್ಲಿ ನಡೆಯುವ ಅಪಘಾತಗಳನ್ನು ಕಂಡು ನಿತ್ಯ ನರಕವಾಗಿದೆ. ಬ್ರೇಕ್ ಶಬ್ದ ಕೇಳಿದರೆ ಹೃದಯ ಢವಢವ ಅನ್ನುತ್ತದೆ. ಅಷ್ಟು ಅಪಘಾತಗಳು ಸಂಭವಿಸುತ್ತದೆ. ಇಲ್ಲಿನ ಡಿವೈಡರ್ ಬಂದ್ ಮಾಡಲೇಬೇಕು. ಅಬ್ದುಲ್ ರೆಹಮಾನ್, ಹೂವಿನ ವ್ಯಾಪಾರಿ, ಮೂಲ್ಕಿ

ಸರಕಾರದ ನಿಯಮದಂತೆ ಡಿವೈಡರ್ ನಿರ್ಮಿಸಬೇಕು. ಜನರು ಕೇಳಿದ ಕಡೆ ಡಿವೈಡರ್ ನಿರ್ಮಿಸಬಾರದು. ಮೂಲ್ಕಿಯ ಅಪಘಾತಗಳಿಗೆ ಅವೈಜ್ಞಾನಿಕವಾಗಿ ನಿರ್ಮಿಸಿದ ಡಿವೈಡರ್‍ಗಳೇ ಕಾರಣ.
ಅಬ್ದುಲ್ ರಜಾಕ್, ಮೂಲ್ಕಿ ನಪಂ ಮಾಜಿ ಸದಸ್ಯರು.