ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ತೀರ್ಮಾನ

ಮೂಲ್ಕಿ: ಡಿಸೆಂಬರ್ 28 ಶನಿವಾರ ವಾಡಿಕೆಯ ಮೂಲ್ಕಿ ಸೀಮೆ ಅರಸು ಕಂಬಳ ಸಾಂಪ್ರದಾಯಿಕವಾಗಿ ನಡೆಯಲಿದ್ದು, ಈ ಬಾರಿಯ ಕಂಬಳವನ್ನು ಪ್ಲಾಸ್ಟಿಕ್ ನಿಷೇಧದೊಂದಿಗೆ ಆಚರಿಸಲು ಕಂಬಳ ಸಮಿತಿ ತೀರ್ಮಾನಿಸಿದೆ.

ಭಾನುವಾರ ಸಂಜೆ ಪಡುಪಣಂಬೂರಿನ ಮೂಲ್ಕಿ ಸೀಮೆ ಅರಮನೆ ಚಾವಡಿಯಲ್ಲಿ ನಡೆದ ಕಂಬಳ ಸಮಿತಿಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಕಂಬಳದುದ್ದಕ್ಕೂ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಯಿತು.

ಸ್ವಚ್ಛತೆಗೆ ಆದ್ಯತೆ: ಕಂಬಳ ಸಂದರ್ಭ ಅತೀ ಹೆಚ್ಚು ಅಂಗಡಿಗಳು ತೆರೆಯಲಿದ್ದು, ಅವುಗಳಿಗೆ ಸ್ವಯಂ ಸ್ವಚ್ಛತೆ ಕಡ್ಡಾಯಗೊಳಿಸಲೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಈ ಹಿಂದಿನ ಕಂಬಳಗಳ ಸಂದರ್ಭ ಹೆಚ್ಚು ಕಸದ ರಾಶಿಗಳು ಕಂಡುಬರುತ್ತಿದ್ದು, ಈ ಬಗ್ಗೆ ಅಂಗಡಿಗಳಿಗೆ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಸೂಚಿಸಲು ಸಭೆ ನಿರ್ಧರಿಸಿದ್ದು, ಇದಕ್ಕಾಗಿ ಪ್ರತ್ಯೇಕ ಸಮಿತಿ ಮೂಲಕ ಯೋಜನೆ ಜಾರಿಗೆ ತರಲು ನಿರ್ಧರಿಸಲಾಯಿತು.

ವಾಹನ ಪಾರ್ಕಿಂಗ್ ವ್ಯವಸ್ಥೆ: ಕಂಬಳಾಭಿಮಾನಿಗಳ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಬಗ್ಗೆ ಪ್ರತ್ಯೇಕ ಸ್ಥಳಾವಕಾಶಗಳ ಬಗ್ಗೆಯೂ ಚರ್ಚೆ ನಡೆಯಿತು.

ವಿಜೇತ ಕೋಣ ಓಡಿಸುವವರಿಗೆ ನಗದು ಪುರಸ್ಕಾರ: ಅರಸು ಕಂಬಳದಲ್ಲಿ ಇದೇ ಮೊದಲ ಬಾರಿಗೆ ವಿಜೇತ ಕಂಬಳ ಕೋಣಗಳನ್ನು ಓಡಿಸಿದವರಿಗೆ ನಗದು ಪುರಸ್ಕಾರ ನೀಡಲು ಸಮಿತಿಯು ನಿರ್ಧರಿಸಿದೆ.

ಪ್ರಕಾಶ್ ಶೆಟ್ಟಿ ಬಂಜಾರರವರು ಈ ಬಾರಿ ಕಂಬಳ ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕಂಬಳ ಸಮಿತಿಯ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲು ಸಮಿತಿ ನಿರ್ಧರಿಸಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಉಮಾನಾಥ್ ಕೋಟ್ಯಾನ್ ಮತ್ತು ಭರತ್ ಶೆಟ್ಟಿ, ಮಾಜಿ ಸಚಿವರಾದ ಅಭಯಚಂದ್ರ ಜೈನ್ ಮತ್ತು ಅಮರನಾಥ ಶೆಟ್ಟಿ, ಸಹಕಾರ ರತ್ನ ಡಾ.ಎಮ್.ಎನ್.ರಾಜೇಂದ್ರ ಕುಮಾರ್, ಪುಷ್ಪರಾಜ್ ಜೈನ್, ವಿಕಾಸ್ ಜೈನ್, ರಾಜಶೇಖರ ಕೋಟ್ಯಾನ್, ಕಂಬಳ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಆರ್.ಶೆಟ್ಟಿ, ಮುಂಬೈ ಉದ್ಯಮಿಗಳು, ಜನಪ್ರತಿನಿಧಿಗಳು, ಚಲನಚಿತ್ರ ನಟರು ಕಂಬಳದ ಸಂದರ್ಭ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರಾಕ್ಟೀಸ್‍ಗೆ ಕಂಬಳ ಗದ್ದೆ ಸಿದ್ಧ; ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ಪ್ರಾಕ್ಟೀಸ್ ಬೇಕಿದ್ದಲ್ಲಿ ಈಗಲೇ ಕಂಬಳ ಗದ್ದೆ ಸಿದ್ಧವಿದೆ ಎಂದು ಸೀಮೆ ಅರಸರಾದ ದುಗ್ಗಣ್ಣ ಸಾವಂತರು ತಿಳಿಸಿದರು.

ಇದೇ ಸಂದರ್ಭ ಅರಸು ಕಂಬಳ ಸಮಿತಿಗೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಕಂಬಳದ ಪೂರ್ವಭಾವಿ ಸಿದ್ಧತೆ, ಅಂಗಡಿಗಳ ವಿತರಣೆ, ಅತಿಥಿಗಳ ಸ್ವಾಗತ, ಕಂಬಳ ಗದ್ದೆ ನಿರ್ವಹಣೆ, ಕಂಬಳ ಕೋಣಗಳ ಯಜಮಾನರಿಗೆ ಆಮಂತ್ರಣ, ಆಮಂತ್ರಣ ಪತ್ರಿಕೆ ವಿತರಣೆ, ವಿವಿಧ ಉಪ ಸಮಿತಿಗಳ ರಚನೆ ಇತ್ಯಾದಿ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಅರಮನೆಯ ಗೌತಮ್ ಜೈನ್, ಕಂಬಳ ಸಮಿತಿಯ ಅಧ್ಯಕ್ಷ ಕೊಲ್ನಾಡುಗುತ್ತು ರಾಮಚಂದ್ರ ನಾಯಕ್, ಕಾರ್ಯದರ್ಶಿ ನವೀನ್ ಶೆಟ್ಟಿ ಎಡ್ಮೆಮಾರ್, ಕೋಶಾಧಿಕಾರಿ ವಿಜಯ ಕುಮಾರ್ ಶೆಟ್ಟಿ, ಚಂದ್ರಶೇಖರ್, ದಿನೇಶ್ ಸುವರ್ಣ, ಶಶೀಂದ್ರ ಸಾಲ್ಯಾನ್, ಗಂಗಾಧರ ಶೆಟ್ಟಿ, ನವೀನ್ ಶೆಟ್ಟಿ, ಅಬ್ದುಲ್ ರಜಾಕ್ ಹಾಗೂ ಕಂಬಳ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.