ಮೂಲ್ಕಿ ಪೋಲಿಸ್‍ಗೆ ಕೊರೊನಾ ಸೋಂಕು: ಪೋಲಿಸ್ ಠಾಣೆ ಸೀಲ್‍ಡೌನ್

ಮೂಲ್ಕಿ: ಇಲ್ಲಿನ ಪೋಲಿಸ್ ಠಾಣೆಯ 52 ವರ್ಷದ ಹೆಡ್‍ಕಾನ್ಸ್‍ಟೇಬಲ್‍ಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಠಾಣೆಯನ್ನು ಶುಕ್ರವಾರ ರಾತ್ರಿಯಿಂದ ಸೀಲ್‍ಡೌನ್ ಮಾಡಲಾಗಿದೆ.

ಮೂಲ್ಕಿ ಠಾಣೆಯಲ್ಲಿ ಅತ್ಯಂತ ಶಿಸ್ತು ಮತ್ತು ಮಡಿವಂತಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್‍ಕಾನ್ಸ್‍ಟೇಬಲ್‍ಗೆ ಜ್ವರ ಬಂದ ಕಾರಣ ಗಂಟಲು ಸ್ರಾವ ಪರೀಕ್ಷೆಗೆ ಕಳುಹಿಸಲಾಗಿತ್ತು. ಶುಕ್ರವಾರ ರಾತ್ರಿ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಕ್ಷೇಮ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೇ ಸಂದರ್ಭ ಮೂಲ್ಕಿ ಪೋಲಿಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದ್ದು ನಪಂ ವತಿಯಿಂದ ಸ್ಯಾನಿಟೈಸ್ ಮಾಡಲಾಗಿದೆ. ಪಕ್ಕದ ಹಳೇ ಪೋಲಿಸ್ ಠಾಣೆಯಲ್ಲಿ ತಾತ್ಕಾಲಿಕ ಕಾರ್ಯನಿರ್ವಹಣೆ ಮುಂದುವರಿಸಲಾಗಿದೆ. ಸೋಂಕಿತ ಪೋಲೀಸ್ ಹೆಡ್ ಕಾನ್ಸ್‍ಟೇಬಲ್‍ರ ಪತ್ನಿ ಹಾಗೂ ಮಕ್ಕಳಿಬ್ಬರ ಗಂಟಲು ಸ್ರಾವ ಪರೀಕ್ಷೆಗೆ ಕಳುಹಿಸಲಾಗಿದೆ.

ಮಹಿಳೆಗೆ ಸೋಂಕು: ಬಪ್ಪನಾಡು ದೇವಳ ಸಮೀಪದ ವಸತಿ ಸಂಕೀರ್ಣದಲ್ಲಿ ವಾಸಿಸುತ್ತಿದ್ದ ವ್ಯಕ್ತಿಗೆ ಸೋಂಕು ತಗುಲಿದ ಬಳಿಕ ಅವರ 33 ವರ್ಷದ ಪತ್ನಿಯ ಗಂಟಲು ದ್ರವ ಸ್ರಾವ ಪರೀಕ್ಷೆ ನಡೆಸಲಾಗಿದ್ದು ಶನಿವಾರ ವರದಿ ಪಾಸಿಟಿವ್ ಬಂದಿದೆ. ಹಾಗಾಗಿ ಅವರನ್ನೂ ಕೋಣಾಜೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಿಂಗಪ್ಪಯ್ಯಕಾಡು ವ್ಯಕ್ತಿಗೆ ಸೋಂಕು: ಲಿಂಗಪ್ಪಯ್ಯಕಾಡು-ಕೆಎಸ್ ರಾವ್ ನಗರದ ಗರ್ಭಿಣಿ ಮಹಿಳೆಗೆ ಸೋಂಕು ತಗುಲಿದ ಬಳಿಕ ಅವರ ಮನೆಯ 48 ವರ್ಷದ ವ್ಯಕ್ತಿಗೆ ಗಂಟಲು ಸ್ರಾವ ಪರೀಕ್ಷೆ ನಡೆಸಿದಾಗ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನೂ ಕೋಣಾಜೆ ಕೋವಿಡ್ ಆಸ್ಪತೆಗೆ ದಾಖಲಿಸಲಾಗಿದೆ.

ಹೆಜಮಾಡಿಯ ಇಬ್ಬರಿಗೆ ಪಾಸಿಟಿವ್: ಹೆಜಮಾಡಿ ಗರಡಿ ಸಮೀಪದ 17ರ ಹರೆಯದ ಯುವಕ ಮತ್ತು ಯುವತಿ ಸ್ವಯಂಪ್ರೇರಣೆಯಿಂದ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಟಲು ಸ್ರಾವ ಪರೀಕ್ಷೆಗೆ ಒಪ್ಪಿಸಿದ್ದು, ಶನಿವಾರ ಅವರಿಬ್ಬರ ವರದಿ ಪಾಸಿಟಿವ್ ಬಂದಿದೆ. ಅವರನ್ನು ಕೋವಿಡ್ ಅಸ್ಪತ್ರೆಗೆ ದಾಖಲಿಸಿ ಅವರಿದ್ದ ಹೆಜಮಾಡಿಯ ಮನೆಯನ್ನು ಸೀಲ್‍ಡೌನ್ ಮಾಡಲಾಗಿದೆ