ಮೂಲ್ಕಿ ತಾಲೂಕು ರಚನೆ:ಮೂಲ್ಕಿ ನಾಗರಿಕರ ಹರ್ಷ

ಮೂಲ್ಕಿ: ಮೂಲ್ಕಿ ಹೋಬಳಿಯ ಜನತೆಯ ಐದು ದಶಕದ ಹಿಂದಿನಿಂದ ಇದ್ದ ಬೇಡಿಕೆಯಾದ ಮೂಲ್ಕಿ ತಾಲೂಕು ರಚನೆ ಕನಸು ಕೊನೆಗೂ ನನಸಾಗಿದೆ. ಈ ಬಾರಿ ಮೂಲ್ಕಿ ತಾಲೂಕು ರಚನೆ ಖಚಿತ ಎಂದು ಮಾಹಿತಿ ಅರಿತ ಜನಪ್ರತಿನಿಧಿಗಳು,ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಮುಖ್ಯ ಮಂತ್ರಿ ಎಚ್‍ಡಿ ಕುಮಾರ ಸ್ವಾಮಿಯವರು 2017ರ ನವಂಬರ್‍ನಲ್ಲಿ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಮೂಲ್ಕಿಯ ನಾಗರಿಕರು ಅವರಲ್ಲಿ ಮೂಲ್ಕಿ ತಾಲೂಕು ರಚನೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದರು.ಆ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕರು ಮುಂದಿನ ಚುನಾವಣೆಯಲ್ಲಿ ತಾವು ಮುಖ್ಯ ಮಂತ್ರಿಯಾಗುವುದಾಗಿ ಅರಸಿ ಪ್ರಸಾದ ನೀಡಿದರು.ಆಗ ತಾನು ಮುಖ್ಯ ಮಂತ್ರಿಯಾದಲ್ಲಿ ಒಂದು ವಾರದ ಒಳಗೆ ಮೂಲ್ಕಿ ತಾಲೂಕು ಘೋಷಣೆ ಮಾಡುವುದಾಗಿ ಅಶ್ವಾಸನೆ ನೀಡಿದ್ದರು.ಮುಖ್ಯ ಮಂತ್ರಿಯಾದ ಬಳಿಕ ಅವರು ನೀಡಿದ ಅಶ್ವಾಸನೆ ಬಗ್ಗೆ ಮೂಲ್ಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾಗರಿಕರು ಅವರಲ್ಲಿ ತಿಳಿಸಿದಾಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿರುವುದರಿಂದ ನಿರ್ಧಾರ ತೆಗೆದು ಕೊಳ್ಳಲು ಅಸಾಧ್ಯವಾಗಿದ್ದು ಆದರೂ ಮೂಲ್ಕಿ ತಾಲೂಕು ಘೋಷಣೆ ಮಾಡುವುದಾಗಿ ತಿಳಿಸಿದ್ದರು.ಈ ಬಾರಿ ಬಜೆಟ್ ಸಂದರ್ಭದಲ್ಲಿ ಐದು ನೂತನ ತಾಲೂಕುಗಳನ್ನು ಘೋಷಿಸಿದ್ದು ಮೂಲ್ಕಿಯನ್ನು ಕಡೆಗಣಿಸಲಾಗಿತ್ತು.ಇತ್ತೀಚೆಗೆ ಧರ್ಮ¸ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿಯವರು ಮೂಲ್ಕಿ ತಾಲೂಕು ಬಗ್ಗೆ ಪ್ರಸ್ತಾವಿಸಿದಾಗ ಸಪ್ಲಿಮೆಂಟರಿ ಬಜೆಟ್ ನಲ್ಲಿ ಮೂಲ್ಕಿ ತಾಲೂಕು ಘೋಷಿಸುವುದಾಗಿ ತಿಳಿಸಿದ್ದು ಅದರಂತೆ ಇದೀಗ ಕ್ಯಾಬಿನೆಟ್ ಸಭೆಯಲ್ಲಿ ಕುಶಾಲ ನಗರ ಸೇರಿದಂತೆ ಮೂಲ್ಕಿಯನ್ನು ತಾಲೂಕಾಗಿ ಘೋಷಿಸಿ ಕೊಟ್ಟ ಮಾತನ್ನು ಉಳಿಸಿದ್ದಾರೆ.

ಮೂಲ್ಕಿ ತಾಲೂಕು ರಚನೆಯಲ್ಲಿ ಮಾಜಿ ಸಚಿವರುಗಳಾದ ಕೆಅಮರನಾಥ ಶೆಟ್ಟಿ ಮತ್ತು ಕೆ ಅಭಯಚಂದ್ರ ಜೈನ್ ರವರ ಪಾತ್ರ ಮಹತ್ತರದಾಗಿದ್ದು ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಅಭಯಚಂದ್ರರವರು ಸಿದ್ದರಾಮಯ್ಯನವರ ಮೇಲೆ ಒತ್ತಡ ಹಾಕಿ ಮೂಲ್ಕಿ ವಿಶೇಷ ತಹಶೀಲ್ದಾರ್ ನೇಮಕ ಮಾಡುವಲ್ಲಿ ಯಶಸ್ವಿಯಾಗಿದ್ದರು.ಮುಂದಿನ ದಿನಗಳಲ್ಲಿ ತಾಲೂಕು ರಚನೆಗೆ ಪೂರಕವಾಗಿ ಹಲವಾರು ಸರ್ಕಾರಿ ಕಚೇರಿ ಸೇರಿದಂತೆ ಮೂಲಭುತ ಸೌಕರ್ಯಗಳ ಅಗತ್ಯವಿದೆ.
ಮೂಲ್ಕಿ ತಾಲೂಕು ರಚನೆ ಕನಸು ಸುಮಾರು ಐದು ದಶಕಗಳಿಂದ ನಡೆಯುತ್ತಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ ಮೂಲ್ಕಿಯು ಬಂದರು,ನ್ಯಾಯಾಲಯ,ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ಎಲ್ಲಾ ವ್ಯವಸ್ತೆಗಳನ್ನು ಹೊಂದಿರುವ ಪ್ರಮುಖ ಕೇಂದ್ರವಾಗಿತ್ತು. ನವ ಮಂಗಳೂರು ಬಂದರು ಆದ ಬಳಿಕ ಹಾಗೂ ನ್ಯಾಯಾಲಯವು ಮೂಲ್ಕಿಯಿಂದ ಮಂಗಳೂರಿಗೆ ಹೋದ ನಂತರ ಮೂಲ್ಕಿಯ ಅಭಿವೃದ್ದಿ ಕುಂಟುತ್ತಾ ಸಾಗಿತ್ತು.1995 ರಲ್ಲಿ ಜೆಎಚ್ ಪಟೇಲ್ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ದ.ಕ.ಜಿಲ್ಲೆಯನ್ನು ವಿಭಜಿಸಿ ಉಡುಪಿ ಜಿಲ್ಲೆ ರಚಿಸುವಾಗ ಮೂಲ್ಕಿಯ ಶಾಂಭವಿ ಸೇತುವೆ ಮತ್ತೊಂದು ಬದಿಯ ವ್ಯಾಪ್ತಿಯ ಹೆಜಮಾಡಿ,ಪಡುಬಿದ್ರಿ,ಫಲಿಮಾರ್ ಗ್ರಾಮ ಪಂಚಾಯಿತಿಗಳನ್ನು ಉಡುಪಿ ಜಿಲ್ಲೆಗೆ ಸೇರಿಸಿದ್ದರಿಂದ ಮೂಲ್ಕಿ ತಾಲೂಕು ರಚನೆಗೆ ಹಿನ್ನಡೆಯಾಗಿತ್ತು. ಬಳಿಕ ಸರ್ಕಾರವು ತಾಲೂಕು ರಚನೆಗೆ ನೇಮಿಸಿದ್ದ ಎಂ ಬಿ ಪ್ರಕಾಶ್ ಸಮಿತಿಯು ತನ್ನ ವರದಿಯಲ್ಲಿ ಮೂಡುಬಿದಿರೆ ತಾಲೂಕು ರಚನೆಗೆ ಪ್ರಸ್ತಾವನೆ ನೀಡಿದ್ದು ಜೊತೆಗೆ ಮಂಗಳೂರು ತಾಲೂಕು ವ್ಯಾಪ್ತಿಯು ಹೆಚ್ಚಿನ ವಿಸ್ತೀರ್ಣ ಹೊಂದಿರುವುದರಿಂದ ಮಂಗಳೂರು ಗ್ರಾಮಾಂತರ ತಾಲೂಕು ರಚಿಸುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.ಮೂಲ್ಕಿಯ ಹೋಬಳಿಯ ಜನತೆಗೆ ಮಂಗಳೂರು ಗ್ರಾಮಾಂತರ ತಾಲೂಕಾಗಿ ಮೂಲ್ಕಿ ಯಾಗುತ್ತದೆಯೆಂಬ ಭರವಸೆ ಉಳಿದಿತ್ತು.ಯಾವಾಗ ಮೂಡುಬಿದಿರೆ ತಾಲೂಕು ರಚನೆಯಾಯಿತೋ ಆವಾಗ ಮೂಲ್ಕಿ ತಾಲೂಕು ರಚನೆ ಕನಸಾಗಿ ಉಳಿದಿತ್ತು.ಬಳಿಕ ಇಂದಿನ ಮುಖ್ಯ ಮಂತ್ರಿಯವರು ನೀಡಿದ ಅಶ್ವಾಸನೆ ಮೇಲೆ ಭರವಸೆಯಿತ್ತು.ಇದೀಗ ಆ ಭರವಸೆ ಈಡೇರಿದೆ.

ಮೂಲ್ಕಿ ಹೋಬಳಿಯಲ್ಲಿ 10 ಗ್ರಾಮ ಪಂಚಾಯಿತಿ, ಒಂದು ಪಟ್ಟಣ ಪಂಚಾಯಿತಿ, 32 ಗ್ರಾಮಗಳು, ಸಬ್‍ರಿಜಿಸ್ಟ್ರಾರ್ ಕಚೇರಿ, ಸರ್ಕಾರಿ ಮತ್ತು ಖಾಸಗಿ ಪ್ರಥಮ ದರ್ಜೆ ಪದವಿ ಪೂರ್ವ ಕಾಲೇಜುಗಳು, ಎಲ್ಲಾ ಪ್ರಮುಖ ರಾಷ್ಟ್ರೀಯ ಮಟ್ಟದ ಬ್ಯಾಂಕ್‍ಗಳ ಶಾಖೆಗಳು, ನಾಡ ಕಚೇರಿ, ವಿಶೇಷ ತಹಶೀಲ್ದಾರ್, ಕೈಗಾರಿಕಾ ಪ್ರಾಂಗಣ, ಜನ ವಸತಿ ಪ್ರದೇಶಗಳು, ರೈಲ್ವೇ ನಿಲ್ದಾಣ ಇದೆ.

ತಾಲೂಕು ಕೇಂದ್ರವಾದರೆ ಮಿನಿ ವಿಧಾನ ಸೌಧ ನಿರ್ಮಿಸಲು ಸ್ಥಳ ಕಾದಿರಿಸಲಾಗಿದೆ.
ನಾನು ಶಾಸಕನಾಗಿದ್ದ ಸಂದರ್ಭ ಮೂಲ್ಕಿ ತಾಲೂಕು ಆಗಿ ಪರಿವರ್ತಿಸಲು ಅಗತ್ಯವಿದ್ದ ಕೆಲಸಗಳನ್ನು ಮಾಡಿದ್ದೇನೆ. ತಾಲೂಕು ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ವರದಿಗಳನ್ನು ಅಂದಿನ ಸರಕಾರ ಹಾಗೂ ಈಗಿನ ಸರಕಾರಕ್ಕೆ ನೀಡಿದ್ದೇನೆ.ಮೂಲ್ಕಿಯ ಜನತೆಯ ಆಶೋತ್ತರಗಳಿಗೆ ಕುಮಾರಸ್ವಾಮಿ ಸರಕಾರ ಸ್ಪಂದಿಸಿರುವುದು ಸಂತಸ ತಂದಿದೆ.
– ಕೆ.ಅಮರನಾಥ ಶೆಟ್ಟಿ, ಮಾಜಿ ಸಚಿವರು.

ಮೂಲ್ಕಿ ಜನತೆಯ ಸುದೀರ್ಘ ಹೋರಾಟದ ಫಲವಾಗಿದೆ. ಕೇವಲ ಘೋಷಣೆಯಾದರೆ ಸಾಲದು ಇದರ ಬಗ್ಗೆ ಎಲ್ಲಾ ಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಶೀಘ್ರವಾಗಿ ತಾಲೂಕಿಗೆ ಸಂಬಂಧಿಸಿದ ಪ್ರಕ್ರಿಯೆಗಳು ತ್ವರಿತವಾಗಿ ನಡೆಯಬೇಕು.ಮೂಲ್ಕಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ವಂದನೆಗಳು
-ಹರಿಕೃಷ್ಣ ಪುನೂರೂರು
ಅಧ್ಯಕ್ಷರು , ಮೂಲ್ಕಿ ತಾಲೂಕು ಹೋರಾಟ ಸಮಿತಿ

ಮೂಲ್ಕಿ ತಾಲೂಕಾಗಿಸಲು ಅಗತ್ಯವಾದ ವ್ಯವಸ್ಥೆಯನ್ನು ತಾನು ಶಾಸಕನಾಗಿ ಸಚಿವನಾಗಿ ನಡೆಸಿದ್ದೇನೆ. ಮೈತ್ರಿ ಸರ್ಕಾರಕ್ಕೆ ಇಲ್ಲಿನ ಮನವಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ , ಹಿಂದಿನ ಶಕ್ತಿಯಾಗಿ ಅಮರನಾಥ ಶೆಟ್ಟಿಯವರ ಪ್ರಯತ್ನ, ಹರಿಕೃಷ್ಣ ಪುನೂರೂರು ಅವರ ನೇತೃತ್ವದ ಹೋರಾಟವು ಸಹ ಕಾರಣವಾಗಿದೆ. ಇದು ಪ್ರತಿಯೊಬ್ಬ ಮೂಲ್ಕಿ ನಾಗರಿಕನ ಕನಸು ನನಸಾಗಿದೆ.
-ಕೆ.ಅಭಯಚಂದ್ರ ಜೈನ್,ಮಾಜಿ ಸಚಿವರು.

ಮೂಲ್ಕಿ ತಾಲೂಕು ಘೋಷಣೆಯಾಗಿರುವುದು ಸಂತಸ ತಂದಿದೆ. ಈಗಾಗಲೇ ಘೋಷಣೆ ಮಾಡಿದ ಮೂಡಬಿದ್ರಿಗೆ ಹಾಗೂ ಘೋಷಣೆಯ ಹಂತದಲ್ಲಿರುವ ಮೂಲ್ಕಿಗೆ ಪೂರ್ಣ ಪ್ರಮಾಣದ ಸವಲತ್ತು ನೀಡಲು ಮುಖ್ಯಮಂತ್ರಿಗಳಿಗೆ ವಿಶೇಷ ಮನವಿಯನ್ನು ಈಮೊದಲೇ ಸಲ್ಲಿಸಿದ್ದೇನೆ.
– ಉಮಾನಾಥ ಕೋಟ್ಯಾನ್,ಶಾಸಕರು,ಮೂಲ್ಕಿ-ಮೂಡಬಿದಿರೆ

ಮೂಲ್ಕಿ ಅಭಿವೃದ್ಧಿ ಸಮಿತಿಯ ಮನವಿಗೆ ಕುಮಾರಸ್ವಾಮಿಯವರು ಶೀಘ್ರ ಸ್ಪಂದಿಸಿದ್ದು ಅವರಿಗೆ ಮೂಲ್ಕಿ ನಾಗರಿಕರ ಪರವಾಗಿ ಅಭಿನಂದನೆಗಳು
-ಹರೀಶ್ ಎನ್.ಪುತ್ರನ್,ಅಧ್ಯಕ್ಷರು,ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ.