ಮೂಲ್ಕಿಯಲ್ಲಿ ನಿತ್ಯ ವಲಸೆ ಕಾರ್ಮಿಕರ ಉಪಟಳ

ಮೂಲ್ಕಿ: ದಕ ಉಡುಪಿ ಗಡಿ ಭಾಗವಾದ ಮೂಲ್ಕಿಯಲ್ಲಿ ನಿತ್ಯ ಹೊರ ರಾಜ್ಯಗಳ ವಲಸೆ ಕಾರ್ಮಿಕರ ಉಪಟಳ ಅಧಿಕವಾಗುತ್ತಿದ್ದು ಮೂಲ್ಕಿ ಪೋಲಿಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಅವಿಭಜಿತ ದಕ ಜಿಲ್ಲೆಯಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ದುಡಿಯುತ್ತಿದ್ದು, ಕಳೆದೊಂದು ತಿಂಗಳಿಂದ ತಮ್ಮ ತಮ್ಮ ರಾಜ್ಯ, ಊರುಗಳಿಗೆ ತೆರಳುವ ದಾವಂತದಲ್ಲಿದ್ದು, ಹೆದ್ದಾರಿಯಲ್ಲಿರುವ ಮೂಲ್ಕಿ ಮೂಲಕ ನಿತ್ಯ ಕಾಲ್ನಡಿಗೆ ಮೂಲಕ ಸಂಚರಿಸುತ್ತಿದ್ದಾರೆ. ಇವರೆಲ್ಲರನ್ನೂ ವಿಚಾರಿಸಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಪೋಲಿಸರು ನಿತ್ಯ ಹೆಣಗಾಡುತ್ತಿದ್ದಾರೆ.
ರಾಜ್ಯದೊಳಗಿನ ಕಾರ್ಮಿಕರನ್ನು ಮೊದಲು ಗಂಜಿ ಕೇಂದ್ರದಲ್ಲಿರಿಸಿ ಅವರಿಗೆ ಹೋಗಬೇಕಿದ್ದೆಡೆ ತಹಶೀಲ್ದಾರ್ ಮಾಣಿಕ್ಯ ಎಮ್. ಮತ್ತು ಮೂಲ್ಕಿ ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ ಮುತುವರ್ಜಿಯೊಂದಿಗೆ ಬಸ್ಸು ವ್ಯವಸ್ಥೆ ಕಲ್ಪಿಸಿದ್ದಾರೆ. ಉತ್ತರ ಭಾರತದ ಸಾವಿರಾರು ಕಾರ್ಮಿಕರನ್ನು ರೈಲು ಮೂಲಕ ತೆರಳುವಂತೆ ಸಹಕರಿಸಿದ್ದಾರೆ.

ಮಂಗಳವಾರ ಸಂಜೆ ಮಂಗಳೂರು ಕಡೆಯಿಂದ ಬಂದ ನೂರಕ್ಕೂ ಅಧಿಕ ಕಾರ್ಮಿಕರನ್ನು ಸಮುದಾಯ ಭವನದಲ್ಲಿರಿಸಿ ಊಟೋಪಚಾರ ಮತ್ತು ವೈದ್ಯಕೀಯ ತಪಾಸಣೆ ನಡೆಸಿದ್ದಾರೆ.

ಬುಧವಾರ ಪಂಜಿಮೊಗರು ಕಡೆಯಿಂದ ನೂರಕ್ಕೂ ಅಧಿಕ ಮಧ್ಯ ಪ್ರದೇಶದ ವಲಸೆ ಕಾರ್ಮಿಕರು ಕಾಲ್ನಡಿಗೆ ಮೂಲಕ ಮೂಲ್ಕಿಯಿಂದಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದು, ಮೂಲ್ಕಿ ಸಿಪಿಐ ಜಯರಾಮೇ ಗೌಡ ಮತ್ತು ಎಸ್‍ಐ ಶೀತಲ್ ಕುಮಾರ್ ತಡೆದು ನಿಲ್ಲಿಸಿದ್ದಾರೆ. ಬಳಿಕ ಸೇವಾ ಸಿಂಧು ಅನುಮತಿ ಬಗ್ಗೆ ಮನದಟ್ಟು ಮಾಡಿ ಅವರನ್ನು ಲಾರಿ ಮೂಲಕ ಪಂಜಿಮೊಗರುಗೆ ವಾಪಾಸು ಕಳಿಸಿದ್ದಾರೆ.

ಲಾಕ್‍ಡೌನ್ ಆರಂಭಗೊಂಡಂದಿನಿಂದ ಮೂಲ್ಕಿಯಲ್ಲಿ ಕಾಲ್ನಡಿಗೆ ಮೂಲಕ ಗುಂಪಾಗಿ ತೆರಳುತ್ತಿರುವುದು ಮೂಲ್ಕಿ ಪೋಲಿಸರಿಗೆ ತಲೆನೋವಾಗಿ ಪರಿಣಮಿಸಿದೆ. ದಕ ಜಿಲ್ಲೆಯ ಉಳಿದ ಪೋಲಿಸ್ ಠಾಣೆಗಳು ವಲಸೆ ಕಾರ್ಮಿಕರ ಬಗ್ಗೆ ಅಸಡ್ಡೆ ತೋರುತ್ತಿದ್ದು, ತಮ್ಮ ವ್ಯಾಪ್ತಿಯಿಂದಲೂ ಮೂಲ್ಕಿ ಕಡೆಗೇ ಕಳುಹಿಸುತ್ತಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಮಂಗಳವಾರ ನಾಟೆಕಲ್‍ನಿಂದ ಮೂಲ್ಕಿಗೆ ನಡೆದುಕೊಂಡು ಬಂದ ನೂರಕ್ಕೂ ಅಧಿಕ ವಲಸೆ ಕಾರ್ಮಿಕರು ಹೆದ್ದಾರಿಯಲ್ಲಿರುವ 4-5 ಪೋಲಿಸ್ ಠಾಣಾ ವ್ಯಾಪ್ತಿಯನ್ನು ದಾಟಿಕೊಂಡು ಬಂದಿದ್ದಾರೆ. ಆದರೆ ಈ ಬಗ್ಗೆ ಅವರಿಗೆ ಮಾಹಿತಿಯೇ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.

ಲಾಕ್‍ಡೌನ್ ಆರಂಭದಲ್ಲಿ ಮಂಗಳೂರು ಕಡೆಯಿಂದ ಲಾರಿ ಮೂಲಕ ನೂರಕ್ಕೂ ಅಧಿಕ ವಲಸೆ ಕಾರ್ಮಿಕರು ಮೂಲ್ಕಿಗೆ ಬಂದು ಇಳಿಸಲ್ಪಟ್ಟಿದ್ದರು. ಈ ಸಂದರ್ಭ ಮೂಲ್ಕಿ ಪೋಲಿಸರೇ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು.

ಫೋಟೋ: ಕ್ಯಾ: ಬುಧವಾರ ಪಂಜಿಮೊಗರುವಿನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದ ವಲಸೆ ಕಾರ್ಮಿಕರನ್ನು ಮೂಲ್ಕಿಯಲ್ಲಿ ತಡೆದು ಲಾರಿ ಮೂಲಕ ವಾಪಾಸು ಕಳಿಸಲಾಯಿತು.