ಮೂರು ದಿನದೊಳಗೆ ಸಾಸ್ತಾನ ಟೋಲ್‍ನಲ್ಲಿ ಸ್ಥಳೀಯರ ಸುಂಕ ವಿನಾಯಿತಿ ರದ್ದು-ನವಯುಗ್ ಪಿಎಮ್ ಶಂಕರ್ ರಾವ್ ಡಿಸಿಗೆ ಹೇಳಿಕೆ

ಪಡುಬಿದ್ರಿ: ಕರ್ನಾಟಕ ರಕ್ಷಣಾ ವೇದಿಕೆಯು ಕಳೆದ 24 ದಿನಗಳಿಂದ ಹೆಜಮಾಡಿ ಟೋಲ್‍ನಲ್ಲಿ ಪಡುಬಿದ್ರಿ ಜಿಪಂ ವ್ಯಾಪ್ತಿಯ ಸ್ಥಳೀಯರಿಗೆ ಸಂಪೂರ್ಣ ಸುಂಕ ವಿನಾಯಿತಿಯನ್ನು ಬಯಸಿ ನಡೆಸುವಲ್ಲಿಗೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಗುರುವಾರ ಭೇಟಿ ನೀಡಿದರು.ಈ ಸಂದರ್ಭ ಟೋಲ್ ವಿನಾಯಿತಿ ಬಗ್ಗೆ ಡಿಸಿ ಕೇಳಿದ ಪ್ರಶ್ನೆಗೆ ನವಯುಗ್ ಪ್ರಾಜೆಕ್ಟ್ ಮ್ಯಾನೇಜರ್ ಶಂಕರ್ ರಾವ್, ಕಂಪನಿ ನಿರ್ಧಾರ ಪ್ರಕಾರ ಸಾಸ್ತಾನದಲ್ಲಿ ಈಗ ನೀಡುತ್ತಿರುವ ವಿನಾಯಿತಿಯನ್ನು ಮೂರು ದಿನದೊಳಗೆ ರದ್ದುಪಡಿಸುವುದಾಗಿ ಘೋಷಿಸಿದರು.

ನಿನ್ನೆ ಮಸಿ ಬಳಿದು ಪ್ರತಿಭಟನೆ ನಡೆಸಿದ್ದ ಮುಷ್ಕರಕಾರರು ಇಂದು ಕಾರ್ಯಕರ್ತ ಆಸೀಫ್ ಆಪದ್ಬಾಂಧವ ತಲೆ ಬೋಳಿಸಿ ಅರೆನಗ್ನರಾಗಿ ಪ್ರತಿಭಟನೆಯಲ್ಲಿ ನಡೆಸಿ,ಗಮನ ಸೆಳೆದರು.

ಸಾಸ್ತಾನದಲ್ಲಿನ ಸುಂಕ ವಿನಾಯಿತಿಯನ್ನೂ ನವಯುಗ ರದ್ದುಗೊಳಿಸಲಿದೆ: ನವಯುಗ ಅಧಿಕಾರಿ ಮುಷ್ಕರ ನಿರತರ ಮನವಿಗೆ ಸ್ಪಂದಿಸಲು ಧನಾತ್ಮಕ ನಿರ್ಧಾರದೊಂದಿಗೆ ಬರುವಂತೆ ನವಯುಗ ಅಧಿಕಾರಿ ಶಂಕರ್ ರಾವ್ ಅವರನ್ನು ಜಿಲ್ಲಾಧಿಕಾರಿ ಕರೆಸಿದ್ದರು.ಅಧಿಕಾರಿಯೊಂದಿಗೆ ಅಭಿಪ್ರಾಯವನ್ನು ಸೂಚಿಸುವಂತೆ ಹೇಳಿದಾಗ ಮೇಲಾಧಿಕಾರಿ ಗೌರಿನಾಥ್‍ರೊಂದಿಗೆ ಮೊಬೈಲ್ ಸಂಭಾಷಣೆ ನಡೆಸಿ ಉತ್ತರಿಸುತ್ತಾ, ಪಡುಬಿದ್ರಿಯ ಜನತೆಗೆ ಸುಂಕ ವಿನಾಯಿತಿಯನ್ನು ನೀಡಲಾಗದು. ತಾವು ಈಗಾಗಲೇ ಸಾಸ್ತಾನದಲ್ಲೂ ನೀಡಿರುವ ಸುಂಕ ವಿನಾಯಿತಿಯನ್ನು ರದ್ದುಪಡಿಸುವ ಇರಾದೆಯಲ್ಲಿದ್ದೇವೆ. ಮುಂದಿನ 3 ದಿನದೊಳಗೆ ಸಾಸ್ತಾನ ಟೋಲ್ ವಿನಾಯಿತಿ ರದ್ದುಗೊಳ್ಳಲಿದೆ.20 ಕಿಮೀ ಸುತ್ತಳತೆಯಲ್ಲಿನ ಸ್ಥಳೀಯರು 255 ರೂ. ಗಳ ಪಾಸ್ ಪಡೆದುಕೊಳ್ಳುವಂತೆ ಅಧಿಕಾರಿ ತಿಳಿಸಿರುವುದಾಗಿ ಬಹಿರಂಗವಾಗಿ ಹೇಳಿದರು.

ಇದರಿಂದ ವಿಚಲಿತರಾದ ಜಿಲ್ಲಾಧಿಕಾರಿಗಳು ಈ ಬಗ್ಗೆ ಮೇಲಾಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದರು.ಆದರೂ ಯಾವುದೇ ಪ್ರಯೋಜನವಾಗಲಿಲ್ಲ.

ಶಂಕರ್ ರಾವ್ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಪ್ರತಿಭಟಿಸಿದರು. ತಕ್ಷಣ ಡಿಸಿಯವರು ಅವರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದರು.

ಟೋಲ್ ವಿಚಾರದಲ್ಲಿ ಆದೇಶಿಸಲು ಜಿಲ್ಲಾಡಳಿತಕ್ಕೆ ಕಾನೂನಿನಲ್ಲಿ ಅವಕಾಶಗಳಿಲ್ಲ:ಈ ವೇಳೆ ನವಯುಗ ಕಂಪೆನಿಗೂ ಧಿಕ್ಕಾರವನ್ನು ಘೋಷಿಸಿದ ಪ್ರತಿಭಟನಕಾರರು ಹೆಜಮಾಡಿ ಒಳರಸ್ತೆಯ ಟೋಲ್‍ಗೇಟನ್ನು ತೆಗೆಯುವಂತೆ ಒತ್ತಾಯವನ್ನೂ ಹೇರಿದರು. ಈ ವೇಳೆ ಜಿಲ್ಲಾಡಳಿತವು ಟೋಲ್ ವಿಚಾರದಲ್ಲಿ ಯಾವುದೇ ಆದೇಶ ಮಾಡಲಾಗದು. ಇದಕ್ಕೆ ಕಾನೂನಿನಲ್ಲಿ ಅವಕಾಶಗಳಿಲ್ಲ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ, ರಾಜ್ಯ ಸರಕಾರಗಳ ನಡುವಣ ವಿಚಾರ ಇದಾಗಿದೆ. ನಾವು ರಾಜ್ಯ ಸರಕಾರವು ನವಯುಗ ಕಂಪೆನಿಗೆ ಪೆÇೀಲೀಸ್ ರಕ್ಷಣೆ ನೀಡಲು ಹೇಳಿದ್ದಾಗ ಅದನ್ನು ನೀಡಲು ಆದೇಶಿಸಿದ್ದೆವು ಎಂದು ಜಿಲ್ಲಾಧಿಕಾರಿ ಮುಷ್ಕರ ನಿರತರಿಗೆ ಮನವರಿಕೆ ಮಾಡಿದರು.

ಆದರೆ ನವಯುಗ ಅಧಿಕಾರಿಯ ಈ ಉತ್ತರದಿಂದ ಅಸಮಾಧಾನಗೊಂಡ ಮುಷ್ಕರ ನಿರತರು ಸಾಸ್ತಾನದಲ್ಲಿನ ವಿನಾಯಿತಿಯನ್ನು ಹಿಂತೆಗೆದುಕೊಂಡಾಗ ಜಿಲ್ಲೆಯ ಜನತೆ ರೊಚ್ಚಿಗೆದ್ದು ಬೀದಿಗಿಳಿಯಲಿರುವುದನ್ನು ನವಯುಗ ಕಂಪೆನಿ ಅರಿತುಕೊಳ್ಳಲಿದೆ. ತಾವಂತೂ ತಮ್ಮ ನಿರ್ಧಾರಕ್ಕೆ ಬದ್ಧರಾಗಿ ಮತ್ತೂ ಈ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.
ಸಮಯಾವಕಾಶ ನೀಡಿರಿ: ಜಿಲ್ಲಾಧಿಕಾರಿ ಈ ಸಂದರ್ಭದಲ್ಲಿ ಪ್ರತಿಭಟನಕಾರರಿಗೆ ಉತ್ತರಿಸಿದ ಉಡುಪಿ ಜಿಲ್ಲಾಧಿಕಾರಿ ತಾನು ಸರಕಾರಕ್ಕೆ ನವಯುಗ ದ್ವಂದ್ವದ ಕುರಿತಾಗಿ ವರದಿ ಮಾಡುತ್ತೇನೆ.ನವಯುಗ ಕಂಪೆನಿ ವಿರುದ್ಧ ಈಗಾಗಲೇ ಅವರ ಕಳಪೆ ಕಾಮಗಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಕಂಪೆನಿಯನ್ನು ಬ್ಲಾಕ್‍ಲಿಸ್ಟ್‍ಗೆ ಸೇರಿಸುವಂತೆಯೂ ಸರಕಾರಕ್ಕೆ ವರದಿ ಮಾಡಲಾಗಿದೆ. ಹಾಗಾಗಿ ನವಯುಗ ಅಧಿಕಾರಿಗಳು, ಸರಕಾರದೊಂದಿಗೆ ಚರ್ಚಿಸಿ ಮುಂದಿನ ಮೂರು ದಿನಗಳೊಳಗಾಗಿ ಸಮರ್ಪಕವಾದ ನಿರ್ಧಾರಕ್ಕೆ ಬರೋಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್, ಪಡುಬಿದ್ರಿ ನಾಗರಿಕ ಸಮಿತಿಯ ಅಧ್ಯಕ್ಷ ನವೀನ್‍ಚಂದ್ರ ಶೆಟ್ಟಿ ಮತ್ತಿತರಿಗೆ ತಿಳಿಸಿದ್ದು,ಪ್ರತಿಭಟನೆ ಸ್ಥಗಿತಗೊಳಿಸುವಂತೆ ಮನವಿ ಮಾಡಿದರು.ಇದಕ್ಕೆ ಒಪ್ಪಿದ ಪ್ರತಿಭಟನಾಕಾರರು ಮೂರು ದಿನದವರೆಗೆ ಪ್ರತಿಭಟನೆ ಮುಂದೂಡಲಾಗಿದ್ದು,ಸಮರ್ಪಕ ಉತ್ತರ ದೊರೆಯದಿದ್ದಲ್ಲಿ ಮುಂದೆ ನಿರ್ಣಾಯಕ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಲೋಕೇಶ್ ಕಂಚಿನಡ್ಕ,ದಿನೇಶ್ ಕೋಟ್ಯಾನ್,ಸೈಯ್ಯದ್ ನಿಜಾಮ್,ಹಮೀದ್ ಹೆಜ್ಮಾಡಿ,ದಮಯಂತಿ ವಿ.ಅಮೀನ್,ಮಿಥುನ್ ಆರ್.ಹೆಗ್ಡೆ,ಶರತ್ ಶೆಟ್ಟಿ,ನವೀನ್ ಎನ್.ಶೆಟ್ಟಿ,ಬುಡಾನ್ ಸಾಹೇಬ್,ವೈ.ಸುಕುಮಾರ್,ಹಸನ್ ಬಾವ,ಹರೀಶ್ ಶೆಟ್ಟಿ,ರಮೀಝ್ ಹುಸೈನ್,ಅಬ್ದುಲ್ ಅಜೀಜ್,ಗಣೇಶ್ ಮೆಂಡನ್,ಲೀಲಾಧರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಶಂಕರ್ ರಾವ್ ತರಾಟೆಗೆ: ಹೆದ್ದಾರಿ ಕಾಮಗಾರಿಗಳನ್ನು ವೀಕ್ಷಿಸಿದ ಡಿಸಿಯವರು ಶಂಕರ್ ರಾವ್‍ರನ್ನು ಮತ್ತೆ ಕರೆಸಿ ಸರ್ವಿಸ್ ರಸ್ತೆ 15 ದಿನದೊಳಗೆ ಮಾಡಿ ಮುಗಿಸುವಂತೆ ಆದೇಶಿಸಿದರು.ಅಷ್ಟರಲ್ಲಿ ಮಾಡದಿದ್ದಲ್ಲಿ ಶಂಕರ್ ರಾವ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.ಇದೇ ವೇಳೆ ಹೆದ್ದಾರಿ ಪಕ್ಕ ಕಡಿದ ಮರಗಳ ಬೃಹತ್ ಬೇರುಗಳನ್ನು ಪೇರಿಸಿಡಲಾಗಿದ್ದು,ಶುಕ್ರವಾರ ಮಧ್ಯಾಹ್ನದೊಳಗೆ ಸ್ಥಳಾಂತರಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಂಕರ್ ರಾವ್‍ಗೆ ಎಚ್ಚರಿಸಿದರು.

ಅರ್ಧಂಬರ್ಧ ಕಾಮಗಾರಿ ನಡೆದ ಪಡುಬಿದ್ರಿಯ ಸರ್ವಿಸ್ ರಸ್ತೆಗಳಲ್ಲಿ ಧೂಳು ತುಂಬಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುವ ಬಗ್ಗೆ ಡಿಸಿಯವರ ಗಮನ ಸೆಳೆಯಲಾಯಿತು.ಇದಕ್ಕೆ ಸ್ಪಂದಿಸಿದ ಅವರು,ನಿತ್ಯ ಮೂರು ಬಾರಿ ರಸ್ತೆ ನೀರು ಹರಿಸುವಂತೆ ನಿರ್ದೇಶನ ನೀಡಿದ್ದಲ್ಲದೆ ಸ್ವಯಂ ತಾನೇ ಇದರೆ ಬಗ್ಗೆ ನಿಗಾ ವಹಿಸುವುದಾಗಿ ಎಚ್ಚರಿಸಿದರು.

ಶಂಕರ್ ರಾವ್ ಈ ಬಗ್ಗೆ ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದು,ಶಂಕರ್ ರಾವ್‍ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಪಡುಬಿದ್ರಿ ಗ್ರಾ. ಪಂ. ಪಿಡಿಒ ಪಂಚಾಕ್ಷರೀ ಸ್ವಾಮಿ ಕೆರೀಮಠ್, ಅಧ್ಯಕ್ಷೆ ದಮಯಂತಿ ವಿ. ಅಮೀನ್, ಉಪಾಧ್ಯಕ್ಷ ಸುಕುಮಾರ್ ಆವರಲ್ಲಿ ಪಡುಬಿದ್ರಿ-ಉಡುಪಿ-ಕಾರ್ಕಳ ಬಸ್ ನಿಲ್ದಾಣವನ್ನು ನಿರ್ಮಿಸಲು ಗ್ರಾ.ಪಂ.ಠರಾವು ಮಂಡಿಸಿ ನವಯುಗ ಕಂಪೆನಿಗೆ ರವಾನಿಸಿದ ತಾಣವನ್ನು ವೀಕ್ಷಿಸಿದರು. ಜನತೆಗೆ ಸಮಂಜಸವಾಗುವ ರೀತಿಯಲ್ಲಿ ಮುಂದೆ ಇಕ್ಕಟ್ಟಿನ ಸ್ಥಿತಿ ಉದ್ಭವಿಸದಂತೆ ಜನತೆಯ ಅಭಿಪ್ರಾಯವನ್ನು ಪಡೆದು ಬಸ್ ನಿಲ್ದಾಣ ರಚನೆಯನ್ನು ಪರಾಮರ್ಶಿಸುವಂತೆ ಜಿಲ್ಲಾಧಿಕಾರಿ ಗ್ರಾ.ಪಂ.ಮುಖ್ಯಸ್ಥರಿಗೆ ತಿಳಿಸಿದರು.
ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕಾಪು ಕಂದಾಯ ಪರಿವೀಕ್ಷಣಾಧಿಕಾರಿ ರವಿಶಂಕರ್, ಗ್ರಾಮ ಲೆಕ್ಕಿಗ ಶ್ಯಾಮ್‍ಸುಂದರ್, ನವಯುಗ ಅಧಿಕಾರಿ ಶಂಕರ ರಾವ್,ರಾಮಕೃಷ್ಣ,ಶಿವಪ್ರಸಾದ್ ರೈ, ಪಡುಬಿದ್ರಿ ಪೆÇಲೀಸ್ ಠಾಣಾಧಿಕಾರಿ ಸತೀಶ್ ಎಂ.ಪಿ.ಮತ್ತಿತರರು ಈ ಸಂದರ್ಭದಲ್ಲಿದ್ದರು.