ಮಕ್ಕಳಲ್ಲಿ ಶಿಸ್ತು, ಸಮಯಪ್ರಜ್ಞೆ, ಗುರು ಹಿರಿಯರಿಗೆ ಗೌರವ ಅಗತ್ಯ-ಶಶಿಕಾಂತ್ ಪಡುಬಿದ್ರಿ

ಪಡುಬಿದ್ರಿ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಶಿಸ್ತು ಕಡಿಮೆಯಾಗುತ್ತಿದ್ದು, ಶಿಕ್ಷಕರು ಅವರಲ್ಲಿ ಶಿಸ್ತು, ಸಮಯಪ್ರಜ್ಷೆ ಮತ್ತು ಗುರು ಹಿರಿಯರಿಗೆ ಗೌರವ ನೀಡುವುದನ್ನು ಕಲಿಸಿಕೊಡಬೇಕು ಎಂದು ಉಡುಪಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಹೇಳಿದರು.

ಪಡುಬಿದ್ರಿ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ಗುರುವಾರ ಸರ್ವ ಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರತಿಭಾ ಕಾರಂಜಿ-2019-20ನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಗಳಲ್ಲಿ ನಡೆಯುವ ವಿವಿಧ ಸರಕಾರಿ ಕಾರ್ಯಕ್ರಮಗಳಿಗೆ ಇಲಾಖಾ ಅನುದಾನ ತೀರಾ ಕಡಿಮೆಯಾಗಿದ್ದು, ಕಾರ್ಯಕ್ರಮ ಆಯೋಜನೆಗೆ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖಾ ಅನುದಾನವನ್ನು ಹೆಚ್ಚಿಸಬೇಕೆಂದು ಅವರು ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಮಾತನಾಡಿ, ಬಹುಮಾನಕ್ಕಾಗಿ ಸ್ಪರ್ಧೆ ಬೇಡ. ಪ್ರತಿಯೊಂದರಲ್ಲೂ ಸ್ಪರ್ಧಿಸುವ ಮನೋಭಾವ ಹೊಂದಬೇಕೆಂದು ಕರೆ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮುಖ್ಯ ಅತಿಥಿಯಾಗಿ ಮಾತನಾಡಿ, ಅವಕಾಶಗಳನ್ನು ಬಳಸಿಕೊಳ್ಳಬೇಕು. ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಸ್ತೂಲವಾಗಿ ಗುರುತಿಸಬೇಕು ಎಂದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರೋಜಿನಿ ಮುಖ್ಯ ಅತಿಥಿಯಾಗಿದ್ದರು.

ಪ್ರಭಾರ ಪ್ರಿನ್ಸಿಪಾಲ್ ಯಶೋದಾ ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಕವಿತಾ ಪ್ರಸ್ತಾವಿಸಿದರು. ಉಪ ಪ್ರಿನ್ಸಿಪಾಲ್ ಪ್ರಸನ್ನ ಬಿ. ವಂದಿಸಿದರು. ಶಿಕ್ಷಕಿ ಮೀನಾ ಕುಮಾರಿ ಕಾಯ್ಕ್ರಮ ನಿರ್ವಹಿಸಿದರು.