ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಮೂಲಕ ದೊರೆಯುವ ಸಹ ಶಿಕ್ಷಣ ಮಕ್ಕಳ ಬದುಕಿಗೆ ಪೂರಕ-ಡಾ.ಕೆ.ನಾರಾಯಣ ಪೂಜಾರಿ

ಮೂಲ್ಕಿ: ಬಾಲ್ಯದ ಶಿಕ್ಷಣದ ಜೊತೆಗೆ ರಾಷ್ಟ್ರ ಪ್ರೇಮ ಮತ್ತು ಸಾಮರಸ್ಯದಿಂದ ಕೂಡಿದ ಶ್ರಮದ ಬದುಕನ್ನು ಕಲಿಸುವ ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಮೂಲಕ ದೊರೆಯುವ ಸಹ ಶಿಕ್ಷಣ ಮಕ್ಕಳ ಬದುಕಿಗೆ ಪೂರಕ ಹಾಗೂ ಅವರ ಜೀವನದ ಬೆಳವಣಿಗೆ ಉತ್ತಮ ಪ್ರತಿಫಲವನ್ನು ಕೊಡುವ ಸಾಧನ ಎಂದು ಮೂಲ್ಕಿ ವಿಜಯ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ ಹೇಳಿದರು.

ಅವರು ಶನಿವಾರ ಮೂಲ್ಕಿ ಕಾರ್ನಾಡು ಸಿ.ಎಸ್.ಐ.ಶಿಕ್ಷಣ ಸಂಸ್ಥೆಯ ವಠಾರದಲ್ಲಿ ಜರಗಿದ ಮೂಲ್ಕಿ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಸಂಸ್ಥೆಯ ದ್ವಿತೀಯ ಸೋಪಾನ ಪರೀಕ್ಷೆಯ ಆರಂಭದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಮಾತನಾಡಿ ಸ್ಕೌಟ್ ಎಂಡ್ಸ್ ಗೈಡ್ಸ್ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿ ಜೀವನದಲ್ಲಿ ಸ್ವತಃ ತಾನು ಭಾಗವಹಿಸಿ ಪಡೆದಿರುವ ಅನುಭವದಿಂದ ನನ್ನ ಬದುಕಿಗೆ ಬೇಕಾದ ಬಹಳಷ್ಟು ಉಪಯುಕ್ತ ತರಬೇತಿಯನ್ನು ಈ ಸಂಘಟನೆಯ ಮೂಲಕ ಪಡೆದಿರುವುದಾಗಿ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಎಂ.ಸರ್ವೋತ್ತಮ ಅಂಚನ್‍ಅವರು ವಹಿಸಿ ಮಾತನಾಡಿ ಮೂಲ್ಕಿ ಪರಿಸರದಲ್ಲಿ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಎದುರಿಸುವಲ್ಲಿ ಸ್ಥಳೀಯವಾಗಿ ಭಾಗವಹಿಸುವಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಉತ್ತಮ ಅಂಕ ಪಡೆದು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಭಾಗವಹಿಸುವಲ್ಲಿ ಮೂಲ್ಕಿ ಸ್ಥಳೀಯ ಸಂಸ್ಥೆ ವಿದ್ಯಾರ್ಥಿಗಳಿಗೆ ಸಹಕರಿಸುವುದು ಎಂದು ಹೇಳಿದರು.

ಮೂಲ್ಕಿ ನಾರಾಯಣ ಗುರು ವಿದ್ಯಾಸಂಸ್ಥೆಯ ಆಡಳಿತ ಸಮಿತಿಯ ಸದಸ್ಯ ಯೋಗೀಶ್ ಕೋಟ್ಯಾನ್ ಚಿತ್ರಾಪು ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಿ.ಎಸ್.ಐ.ಶಾಲೆಯ ಮುಖ್ಯೋಪಾಧ್ಯಾಯಿನಿ ಝೀಟಾ ಮೆಂಡೋನ್ಸಾ ಹಾಗೂ ಪರೀಕ್ಷಾ ನಿರ್ವಹಣಾ ಅಧಿಕಾರಿ ಗೀತಾ ಶೆಟ್ಟಿ ವೇದಿಕೆಯಲ್ಲಿದ್ದರು.

ಕಾರ್ಯದರ್ಶಿ ಎಂ.ಹರಿಶ್ಚಂದ್ರ ಸ್ವಾಗತಿಸಿದರು.ಇಂದಿನ ಪರೀಕ್ಷೆಯಲ್ಲಿ ಮೂಲ್ಕಿ ಹೋಬಳಿಯ ವಿವಿಧ ಶಾಲೆಗಳ ಸುಮಾರು 350 ವಿದ್ಯಾರ್ಥಿಗಳು ಭಾಗವಹಿಸಿದರು.