ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳು ಸಾರ್ವಕಾಲಿಕ ಸತ್ಯ -ಕರ್ನಿರೆ ವಿಶ್ವನಾಥ ಶೆಟ್ಟಿ

ಪಡುಬಿದ್ರಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಅಮೃತ ವಾಕ್ಯ, ಅವರ ಜೀವಿತ ಕಾಲದಲ್ಲಿ ನಾಡಿನೆಲ್ಲೆಡೆ ಪಸರಿಸಿದ ಅವರ ತತ್ವಾದರ್ಶಗಳು ಸಾರ್ವಕಾಲಿಕ ಸತ್ಯ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ, ಮುಂಬಯಿ ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿ ಹೇಳಿದರು.

ಅವರು ಹೆಜಮಾಡಿಯ ಬಿಲ್ಲವರ ಸಂಘದಲ್ಲಿ ಜರಗಿದ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹೆಜಮಾಡಿಯ ಬಿಲ್ಲವ ಸಂಘದ ವತಿಯಿಂದ ನಡೆಸುತ್ತಿರುವುದೂ ಶ್ಲಾಘನೀಯ. ಇದರಿಂದಾಗಿ ತಮ್ಮ ಸಂಘದ ವಿಶ್ವಾಸಾರ್ಹತೆಯೂ ಹೆಚ್ಚಿ ವಿದ್ಯಾರ್ಥಿಗಳ ಮನದಲ್ಲಿಯೂ ಶ್ರೀ ನಾರಾಯಣ ಗುರುಗಳ ಪಡಿಯಚ್ಚು ಮೂಡಲಿದೆ. ಇಂತಹಾ ಜನಪರ ಕಾರ್ಯಕ್ರಮಗಳು ಸದಾ ನಡೆಯುತ್ತಿರಲಿ ಎಂದು ವಿಶ್ವನಾಥ ಶೆಟ್ಟಿ ನುಡಿದರು.

ಇನ್ನೋರ್ವ ಮುಖ್ಯ ಅತಿಥಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಹೆಜಮಾಡಿ ಬಿಲ್ಲವರ ಸಂಘದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಘಿಸಿದರು. ಮೂಲ್ಕಿಯ ಅಖಿಲ ಭಾರತ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ್ ಕೋಟ್ಯಾನ್ ಮಾತನಾಡಿ, ಬಿಲ್ಲವರ ಸಂಘಟನೆ ಇನ್ನಷ್ಟು ಬಲಯುತವಾಗಬೇಕಿದ್ದು ಎಲ್ಲರೂ ಸಹಕರಿಸಬೇಕೆಂದರು.

ಹೆಜಮಾಡಿ ಬಿಲ್ಲವರ ಸಂಘದ ಅಭಿವೃದ್ಧಿಯ ರೂವಾರಿ ವಾಸುದೇವ ಆರ್. ಕೋಟ್ಯಾನ್, ಉದ್ಯಮಿ ಚಂದ್ರಶೇಖರ ಎನ್. ಪೂಜಾರಿ, ಮೊಗವೀರ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಸದಾನಂದ ಕೋಟ್ಯಾನ್, ಭಾರತ್ ಬ್ಯಾಂಕ್ ನಿರ್ದೇಶಕರಾದ ಎನ್. ಟಿ. ಪೂಜಾರಿ, ಪುರುಷೋತ್ತಮ ಕೋಟ್ಯಾನ್, ಜಿ.ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ಉದ್ಯಮಿ ಶಿವರಾಮ್ ಪೂಜಾರಿ, ಕೆಥೋಲಿಕ್ ಸಭಾ ಮಂಗಳೂರು ಇದರ ಅಧ್ಯಕ್ಷ ರಾಲಿ ಡಿಕೋಸ್ತ, ಅಖಿಲ ಭಾರತ ಬ್ಯಾರಿ ಪರಿಷತ್ ಸದಸ್ಯ ಅಬ್ಬಾಸ್ ಹಾಜಿ, ಉಡುಪಿ ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್, ತಾ.ಪಂ. ಸದಸ್ಯೆ ರೇಣುಕಾ ಪುತ್ರನ್, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಉಪಸ್ಥಿತರಿದ್ದರು.
ಸಮರಂಭದ ಅಧ್ಯಕ್ಷತೆಯನ್ನು ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್ ವಹಿಸಿ ಶುಭ ಹಾರೈಸಿದರು.

ಗೌರವಾರ್ಪಣೆ: ಇದೇ ಸಂದರ್ಭದಲ್ಲಿ ಕಳೆದ ಬಾರಿಯ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ 90ಕ್ಕೂ ಹೆಚ್ಚಿನ ಅಂಕಗಳನ್ನು ಗಳಿಸಿದ ಎಲ್ಲಾ ಜಾತಿ, ಧರ್ಮಗಳಿಗೆ ಸೇರಿದ ವಿದ್ಯಾರ್ಥಿಗಳನ್ನು ತಲಾ 5000ರೂ. ನಗದು ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಿರೆ ವಿಶ್ವನಾಥ ಶೆಟ್ಟಿ, ಡಾ.ರಾಜಶೇಖರ ಕೋಟ್ಯಾನ್, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್, ಮೊಗವೀರ ಬ್ಯಾಂಕ್ ಅಧ್ಯಕ್ಷ ಸದಾನಂದ ಕೋಟ್ಯಾನ್‍ಅವರನ್ನು ಸಮ್ಮಾನಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಸುನೀತಾ ಎನ್. ಕರ್ಕೇರ ಸ್ವಾಗತಿಸಿದರು. ಶಿವರಾಮ ಜಿ. ಅಮೀನ್ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಸುಧೀರ್ ಕರ್ಕೇರ ವಂದಿಸಿದರು.