ಬಿಲ್ಲವ ಸಮಾಜದ ಪ್ರಗತಿಯಲ್ಲಿ ನಾರಾಯಣ ಗುರುಗಳ ಪಾತ್ರ ಅನನ್ಯ- ಮುದ್ದು ಮೂಡುಬೆಳ್ಳೆ

ಪಡುಬಿದ್ರಿ: ಕ್ರೌರ್ಯಕ್ಕೆ, ಹಿಂಸೆಗೆ ಎಂದೂ ಆಸ್ಪದ ಮಾಡಿಕೊಡದಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಂಘಟನೆಯಿಂದಷ್ಟೇ ಸಮಾಜದ ಪ್ರಗತಿ ಸಾಧ್ಯ ಎಂಬುದನ್ನು ಪ್ರತಿಪಾದಿಸಿದವರು. ಬಿಲ್ಲವ ಸಮಾಜದ ಪ್ರಗತಿಯಲ್ಲಿ ಗುರುಗಳ ಪಾತ್ರ ಅನನ್ಯವಾದುದು ಎಂದು ಮಂಗಳೂರು ವಿವಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಹೇಳಿದರು.

ಅವರು ಪಡುಬಿದ್ರಿಯ ಬಿಲ್ಲವ ಸಮಾಜ ಸೇವಾ ಸಂಘ, ಮಂಗಳೂರು ವಿವಿಯ ಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಪಡುಬಿದ್ರಿಯ ಯುವವಾಹಿನಿ ಘಟಕಗಳ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 91ನೇ ಪುಣ್ಯತಿಥಿಯಂದು `ಸಮಾಜದ ಪ್ರಗತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು’ ಎಂಬ ವಿಚಾರ ಸಂಕಿರಣದ ಸಮನ್ವಯಕಾರರಾಗಿ ಭಾಗವಹಿಸಿ ಮಾತನಾಡಿದರು.
ವಿಚಾರ ಸಂಕಿರಣವನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಉದ್ಘಾಟಿಸಿ ಮಾತನಾಡಿದರು.
ನಾರಾಯಣಗುರುಗಳ ಕುರಿತಾದ ವಿಚಾರವನ್ನು ಮಂಡಿಸಿದ ಉಡುಪಿಯ ಶ್ರೇಯಸ್ ಕೋಟ್ಯಾನ್, ಬ್ರಹ್ಮಶ್ರೀ ನಾರಾಯಣ ಗುರುಗಳು ಕೇರಳದಲ್ಲಿ ಸಮಾಜದ ಒಗಟ್ಟಿಗಾಗಿ ನಡೆಸಿದ ಮಂದಿರಗಳ ಪ್ರತಿಷ್ಠಾಪನೆ, ಬ್ರಹ್ಮ ಮೀಮಾಂಸದ ಮೂಲಕ ಸಮಾಜದ ಉತ್ಥಾನಕ್ಕಾಗಿ ವೇದ ಪಾರಂಗತರೆನಿಸಿದ ಪುರೋಹಿತರನ್ನು ಸೃಜಿಸಿದವರಾಗಿದ್ದರು. ದೇಗುಲಗಳ ಸ್ಥಾಪನೆಯಿಂದ ಜಾತಿಯ ಒಗ್ಗಟ್ಟು ಸಾಧ್ಯವಾಯಿತೆಂದರು.

ಅರ್ಚಕ ಚಂದ್ರಶೇಖರ ಶಾಂತಿ, ಶಶಿಧರ ಪೂಜಾರಿ ಅಡ್ವೆ, ಮೋಹನ ಸುವರ್ಣ ಮೂಲ್ಕಿ, ಉಡುಪಿಯ ಅಮಿತಾಂಜಲಿ, ಮುಖ್ಯ ಅತಿಥಿಯಾಗಿದ್ದ ಜಗದೀಶ್ ಸುವರ್ಣ, ಪಡುಬಿದ್ರಿ ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಶ್ರೀ ಗುರುಗಳ ವಿಚಾರಧಾರೆಯ ಪರವಾಗಿ ಮಾತಾಡಿದರು.

ವೇದಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಪ್ರಚಾರ ನಿರ್ದೇಶಕ ಅಶ್ವತ್ಥ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿಯ ಸದಸ್ಯ ಸಂತೋಷ್ ಉಪಸ್ಥಿತರಿದ್ದರು.

ಯುವವಾಹಿನಿ ಪಡುಬಿದ್ರಿ ಘಟಕಾಧ್ಯಕ್ಷ ಯೋಗೀಶ್ ಪೂಜಾರಿ ಸ್ವಾಗತಿಸಿದರು. ರವಿರಾಜ ಕೋಟ್ಯಾನ್ ಹಾಗೂ ಶೈಲಜಾ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಯುವವಾಹಿನಿಯ ಪಡುಬಿದ್ರಿ ಘಟಕದ ಕಾರ್ಯದರ್ಶಿ ಯಶೋದಾ ವಂದಿಸಿದರು.