ಬಹು ನಿರೀಕ್ಷಿತ ಹೆಜಮಾಡಿ ಬಂದರು ಯೋಜನೆ ಶೀಘ್ರ ಜಾರಿಗೆ ಉಭಯ ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ

ಪಡುಬಿದ್ರಿ: ಸುಮಾರು 138.60 ಕೋಟಿ ರೂ.ವೆಚ್ಚದಲ್ಲಿ ಹೆಜಮಾಡಿ-ಮೂಲ್ಕಿ ಸಂಗಮ ಸ್ಥಳ ಶಾಂಭವಿ ಅಳಿವೆಯ ಉತ್ತರ ಭಾಗದಲ್ಲಿ ಕೇಂದ್ರ-ರಾಜ್ಯ ಸರಕಾರಗಳ ಜಂಟಿ ಅನುದಾನದಡಿ ನಿರ್ಮಾಣಗೊಳ್ಳಲಿರುವ ಬಹುನಿರೀಕ್ಷಿತ ಹೆಜಮಾಡಿ ಬಂದರು ಯೋಜನೆಯ ಶೀಘ್ರ ಜಾರಿಯ ಹಿನ್ನೆಲೆಯಲ್ಲಿ ಗುರುವಾರ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮತ್ತು ದಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಥಳೀಯ ಮೂನುಗಾರ ಮುಖಂಡರು,ಮೀನುಗಾರಿಕೆ ಹಾಗೂ ಬಂದರು ಇಲಾಖಾ ಅಧಿಕಾರಿಗಳ ಜತೆಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್,ಬಂದರು ಯೋಜನೆ ಜಾರಿಗೆ ಕೇಂದ್ರ ಸರಕಾರದ ಅನುದಾನ ಬಿಡುಗಡೆಯಾಗಿದ್ದು,ರಾಜ್ಯ ಸರಕಾರವೂ ಹಸಿರು ನಿಶಾನೆ ತೋರಿಸಿದೆ.ಈ ಹಿನ್ನೆಲೆಯಲ್ಲಿ ಯೋಜನೆಯ ಶೀಘ್ರ ಜಾರಿಯ ಉದ್ದೇಶದಿಂದ ಸ್ಥಳ ಪರಿಶೀಲನೆ ನಡೆಸುತ್ತಿದ್ದೇವೆ.ಆರಂಭಿಕವಾಗಿ ಬ್ರೇಕ್‍ವಾಟರ್ ಕಾಮಗಾರಿಗೆ ಚಾಲನೆ ನೀಡಲಿದ್ದು,ಈ ಭಾಗದ ಖಾಸಗಿ ಜಾಗಗಳನ್ನು ಗುರುತಿಸಿ ವಶಕ್ಕೆ ಪಡೆಯಲು ಆರ್‍ಐಗೆ ಸೂಚನೆ ನೀಡಲಾಗಿದೆ.ಇಲ್ಲಿ ಬಂದರು ನಿರ್ಮಾಣಗೊಂಡಲ್ಲಿ ಈ ಭಾಗದ ಎಲ್ಲಾ ಮೀನುಗಾರರಿಗೆ ತುಂಬಾ ಅನುಕೂಲವಾಗಲಿದ್ದು,ಮಲ್ಪೆ ಮತ್ತು ಮಂಗಳೂರು ಮೀನುಗಾರಿಕಾ ಬಂದರಿನ ಒತ್ತಡ ಕಡಿಮೆಯಾಗಲಿದೆ ಎಂದರು.

ದಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ,ಹೆಜಮಾಡಿ ಬಂದರು ಯೋಜನೆಯ ಬ್ರೇಕ್ ವಾಟರ್ ನಿರ್ಮಾಣದಿಂದ ದಕ ಜಿಲ್ಲೆಯ ಸಸಿಹಿತ್ಲು ಭಾಗದಲ್ಲಿ ತಾತ್ಕಾಲಿಕ ಸಮುದ್ರ ಕೊರೆತ ಉಂಟಾಗುವ ಸಾಧ್ಯತೆ ಬಗ್ಗೆ ಅಲ್ಲಿನ ಮೀನುಗಾರರು ದೂರು ನೀಡಿದ್ದಾರೆ.ಸ್ಥಳೀಯ ಮೀನುಗಾರರು ಹೆದರಿದ್ದಾರೆ.ಜನರ ಭಯ ನಿವಾರಣೆ ಮಾಡಬೇಕು.ಈ ಬಗ್ಗೆ ಸ್ಥಳ ಪರಿಶೀಲನೆ ಹಾಗೂ ಯೋಜನೆ ಬಗ್ಗೆ ಮಾಹಿತಿ ಪಡೆಯಲು ಆಗಮಿಸಿರುವುದಾಗಿ ಹೇಳಿದರು.

ಬ್ರೇಕ್‍ವಾಟರ್ ನಿರ್ಮಾಣದಿಂದ ಸಮುದ್ರ ಕೊರೆತ ಉಂಟಾಗಲಿದೆಯೇ ಮತ್ತು ಒತ್ತುವರಿ ಮರಳು ಯಾವ ಕಡೆ ಶೇಖರಣೆಯಾಗುತ್ತದೆ ಎಂದು ತಂತ್ರಜ್ಞರಿಂದ ಪರಿಶೀಲನೆ ನಡೆಸಲು ಉಡುಪಿ ಜಿಲ್ಲಾಧಿಕಾರಿಗಳು ಬಂದರು ಮತ್ತು ಮೀನುಗಾರಿಕಾ ಇಲಾಖಾ ಇಇ ಮಂಚೇಗೌಡರಿಗೆ ಸೂಚಿಸಿದರು.ಸ್ಥಳದಲ್ಲಿಯೇ ಪುಣೆಯ ಸಿಡಬ್ಲ್ಯುಪಿಆರ್‍ಎಸ್‍ನ ವಿಜ್ಞಾನಿ ಮಹಾಲಿಂಗಯ್ಯ ಜತೆ ದೂರವಾಣಿ ಮೂಲಕ ಮಾತನಾಡಿ ಆದಷ್ಟು ಶೀಘ್ರ ಈ ಬಗ್ಗೆ ಸಂಶೋಧನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಯಿತು.ಮಂಚೇಗೌಡರು ಪುಣೆಗೆ ತೆರಳಿ ಇಲಾಖಾ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಬಹುಬೇಗ ಸಂಶೊಧನೆ ನಡೆಸಿ ವರದಿ ಪಡೆಯಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಈಗಾಗಲೇ ಸರಕಾರವು 63 ಎಕ್ರೆ ಜಾಗವನ್ನು ಬಂದರು ಯೋಜನೆಗಾಗಿ ಗುರುತಿಸಿದ್ದು,ಮುಳುಗಡೆ ಜಾಗಗಳನ್ನೂ ಸೇರಿಸಿಕೊಂಡಲ್ಲಿ ಸುಮಾರು 100 ಎಕ್ರೆಯಷ್ಟು ಜಾಗ ಬಂದರು ಯೋಜನೆಗೆ ದೊರಕಲಿದೆ.ಸದ್ಯ ಬ್ರೇಕ್‍ವಾಟರ್ ಯೋಜನೆಯ ಕಾಮಗಾರಿ ಆರಂಭಿಸಲು ಸರಕಾರಿ ಜಾಗವೇ ಅಧಿಕವಿದ್ದು,4 ಖಾಸಗಿ ಜಾಗಗಳು ಒಳಗೊಂಡಿವೆ.ಅವನ್ನು ಬಹುಬೇಗ ವಶಕ್ಕೆ ಪಡೆಯಲು ಬೇಕಾದ ಕ್ರಮ ಕೈಗೊಳ್ಳುವಂತೆ ಪ್ರಿಯಾಂಕ ಮೇರಿಯವರು ಕಾಪು ಆರ್‍ಐ ರವಿಶಂಕರ್‍ಗೆ ಸೂಚಿಸಿದರು.

ಉಭಯ ಜಿಲ್ಲಾಧಿಕಾರಿಗಳಿಗೆ ಮೂಲ್ಕಿ ವಲಯ ಪರ್ಸೀನ್ ಮತ್ತು ಟ್ರಾಲ್ ಬೋಟ್ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ಎಸ್.ಬಂಗೇರ ಸಮಗ್ರ ಮಾಹಿತಿ ನೀಡಿ,ಹೆಜಮಾಡಿ ಬಂದರು ಯೋಜನೆಗಾಗಿ 40-5- ವರ್ಷಗಳಿಂದ ಹೋರಾಟ ನಡೆಯುತ್ತಿದೆ.ಇಲ್ಲಿ ಹಿಂದೆ ಸಾವಿರಾರು ಯಾಂತ್ರಿಕ ದೋಣಿಗಳಿದ್ದವು.ಬಂದರು ಇಲ್ಲದ ಕಾರಣ ಅವೆಲ್ಲಾ ಬೇರೆ ಬಂದರುಗಳನ್ನು ಆಶ್ರಯಿಸಿಕೊಂಡಿವೆ.ಪ್ರಸ್ತುತ ಬಂದರು ಯೋಜನೆಗಾಗಿ ಸರಕಾರ ಗುರುತಿಸಿದ ಜಾಗವನ್ನು ಹಲವರು ಪರಾಭಾರೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದೆ.ಈ ಭಾಗದಲ್ಲಿ ಹಿಂದೆ ಮೀನುಗಾರರೇ ವಾಸಿಸುತ್ತಿದ್ದು,ಇದೀಗ ಯಾರ್ಯಾರೋ ಜಾಗ ತಮ್ಮದೆಂದು ಹೇಳುವುದು ಕಂಡುಬಂದಿದೆ.ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಮೀನುಗಾರ ಮುಖಂಡರುಗಳಾದ ವೈ.ಗಂಗಾಧರ ಸುವರ್ಣ,ಏಕನಾಥ ಕರ್ಕೇರ,ಹರಿಶ್ಚಂದ್ರ ಮೆಂಡನ್,ಚಂದ್ರಕಾಂತ ಶ್ರೀಯಾನ್,ಚಂದ್ರಶೇಖರ ಸಾಲ್ಯಾನ್,ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್,ಉಪಾಧ್ಯಕ್ಷ ಸುಧಾಕರ ಕರ್ಕೇರ,ಪಿಡಿಒ ಮಮತಾ ಶೆಟ್ಟಿ,ಸದಸ್ಯರಾದ ಪ್ರಾಣೇಶ್ ಹೆಜ್ಮಾಡಿ,ಶೈಲೇಶ್ ಕುಂದರ್ ಮತ್ತು ಶಿವರಾಮ ಶೆಟ್ಟಿ,ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ,ತಾಪಂ ಸದಸ್ಯೆ ರೇಣುಕಾ ಪುತ್ರನ್,ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ,ಇಲಾಖಾಧಿಕಾರಿಗಳಾದ ಮೀನುಗಾರಿಕಾ ಇಲಾಖಾ ಡಿಡಿ ಪಾಶ್ರ್ವನಾಥ್,ಎಡಿ ಕಿರಣ್,ಬಂದರು ಇಲಾಖಾ ಎಇಇ ಉದಯಕುಮಾರ್,ಮೂಲ್ಕಿ ವಿಶೇಷ ತಹಶೀಲ್ದಾರ್ ಮಾಣಿಕ್ಯ,ಗ್ರಾಮಕರಣಿಕರಾದ ಶ್ಯಾಂಸುಂದರ್ ಮತ್ತು ಮೋಹನ್,ಆರ್‍ಐ ದಿಲೀಪ್ ರೋಡ್ಕರ್ ಮತ್ತಿತರರು ಉಪಸ್ಥಿತರಿದ್ದರು.