ಫೆ.5: ಮೂಲ್ಕಿ ಬಂದ್ ಸಹಿತ ಟೋಲ್ ವಿರುದ್ಧ ಪ್ರತಿಭಟನೆಗೆ ಪೂರ್ವಭಾವಿ ಸಭೆ – ಬಂದ್ ಸಹಿತ ಟೋಲ್‍ಗೆ ಮುತ್ತಿಗೆಗೆ ನಿರ್ಧಾರ

ಮೂಲ್ಕಿ: ಮೂಲ್ಕಿ ಹೋಬಳಿಯ ವಾಹನ ಬಳಕೆದಾರರಿಗೆ ಹೆಜಮಾಡಿಯ ಟೋಲ್‍ನಲ್ಲಿ ಸುಂಕ ವಿನಾಯಿತಿಗೆ ಆಗ್ರಹಿಸಿ ಫೆಬ್ರವರಿ 5 ರಂದು ಮೂಲ್ಕಿ ಬಂದ್ ಸಹಿತ ಹೆಜಮಾಡಿ ಟೋಲ್‍ಗೆ ಮುತ್ತಿಗೆ ಹಾಕಲು ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ ನಿರ್ಧರಿಸಿದ್ದು,ಶುಕ್ರವಾರ ಸಂಜೆ ಸಂಘ ಸಂಸ್ಥೆಗಳ ಸಭೆ ನಡೆಸಿ ಬಂದ್ ಯಶಸ್ವಿಗೊಳಿಸಲು ನಿರ್ಧರಿಸಲಾಯಿತು.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಜ್ಞಾನಮಂದಿರದಲ್ಲಿ ಸಮಿತಿಯ ಅಧ್ಯಕ್ಷ ಹರೀಶ್ ಎನ್.ಪುತ್ರನ್ ಅಧ್ಯಕ್ಷತೆಯಲ್ಲಿ ಕರೆದ ಸಭೆಯಲ್ಲಿ ತೀವ್ರ ಚರ್ಚೆಯ ಬಳಿಕ ಬಂದ್ ಸಹಿತ ಟೋಲ್ ಮುತ್ತಿಗೆಗೆ ನಿರ್ಧರಿಸಲಾಯಿತು.

ಇದೇ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ವಿಶ್ವ ಬ್ರಾಹ್ಮಣ ಸಮಾಜದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ ಮತ್ತು ಮೂಲ್ಕಿ ಜಮಾತ್ ಅಧ್ಯಕ್ಷ ಇಕ್ಬಾಲ್ ಅಹಮದ್ ತಮ್ಮ ಸಂಸ್ಥೆಗಳಿಂದ ಬಂದ್ ಸಹಿತ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಘೋಷಿಸಿದರು.

ಶನಿವಾರ ಮತ್ತು ಭಾನುವಾರ ಮೂಲ್ಕಿ ಹೋಬಳಿಯಾದ್ಯಂತ ಬೆಂಬಲ ಯಾಚಿಸಲು ಸಭೆ ನಿರ್ಧರಿಸಿದ್ದು,ಮೂಲ್ಕಿ ನಾಗರಿಕರ ವಾಹನಗಳಿಗೆ ಸುಂಕ ವಿನಾಯಿತಿ ದೊರಕುವವರೆಗೆ ಹೋರಾಟ ಮುಂದುವರಿಸಲು ಒಕ್ಕೊರಲಿನಿಂದ ನಿರ್ಧರಿಸಲಾಯಿತು.

ಮೂಲ್ಕಿ ನಪಂ ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ,ಹೆಜಮಾಡಿ ಟೋಲ್ ವಿರುದ್ಧದ ಎಲ್ಲಾ ಹೋರಾಟಗಳಲ್ಲಿ ಮೂಲ್ಕಿ ನಾಗರಿಕರು ಸಂಪೂರ್ಣವಾಗಿ ಭಾಗವಹಿಸಿದ್ದಾರೆ.ಟೋಲ್‍ನ ಅರ್ಧ ಕಿಮೀ ಹತ್ತಿರದ ಮೂಲ್ಕಿ ನಾಗರಿಕರಿಗೆ ಅಗತ್ಯವಾಗಿ ಸುಂಕ ವಿನಾಯಿತಿ ನೀಡಲೇಬೇಕು.ಈ ಬಗ್ಗೆ ಸಮಿತಿಯು ಹಲವು ಬಾರಿ ನವಯುಗ್ ಕಂಪನಿ ಸಹಿತ ಜನಪ್ರತಿನಿಧಿಗಳಿಗೆ,ಜಿಲ್ಲಾಡಳಿತಕ್ಕೆ ಮನವಿ ಮಾಡಿವೆ.ಪ್ರತೀ ಬಾರಿ ಸುಂಕ ವಿನಾಯಿತಿಯ ಭರವಸೆಗಳನ್ನಷ್ಟೇ ನೀಡಿದ್ದಾರೆ.ಈ ಬಾರಿ ನಾಗರಿಕರು ಬಯಸಿದರೆ ಬಂದ್ ಸಹಿತ ಪ್ರತಿಭಟನೆ ನಡೆಸಿಯೇ ಸಿದ್ಧ ಎಂದು ಹೇಳಿದರು.

ಸಮಿತಿಯ ಅಧ್ಯಕ್ಷ ಹರೀಶ್ ಎನ್.ಪುತ್ರನ್ ಮಾತನಾಡಿ,ಈ ಬಾರಿಯ ಹೋರಾಟ ನಿರ್ಣಾಯಕವಾಗಬೇಕು.ಅದಕ್ಕಾಗಿ ಎಲ್ಲಾ ಪಕ್ಷೀಯರೂ,ಸಂಘ ಸಂಸ್ಥೆಗಳೂ,ಎಲ್ಲಾ ಸಮಾಜದವರೂ,ಸ್ತ್ರೀ ಶಕ್ತಿ ಗುಂಪಿನವರೂ ಬೆಂಬಲ ನೇಡಬೇಕು.ಈ ಬಗ್ಗೆ ಎಲ್ಲರನ್ನೂ ಭೇಟಿ ಮಾಡಿ ಬೆಂಬಲ ಯಾಚಿಸಲಾಗುವುದು ಎಂದರು.

ಮಧು ಆಚಾರ್ಯ ಮಾತನಾಡಿ,ನಮ್ಮ ಬೇಡಿಕೆ ಈಡೇರಿಸಲು ಪ್ರತಿಭಟನೆಯೊಂದೇ ದಾರಿ.ಪ್ರತಿಭಟನೆ ಮೂಲಕ ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಿದೆ ಎಂದರು.

ಪ್ರತಿಬಟನೆಯ ಪೂರ್ವಭಾವಿಯಾಗಿ ಫೆ.3 ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಸಮಿತಿಯ ಸಭೆ ಕರೆದು ಚರ್ಚಿಸಲು ನಿರ್ಧರಿಸಲಾಯಿತು.

ಸಮಿತಿಯ ಜೀವನ್ ಕೆ.ಶೆಟ್ಟಿ,ರವೀಶ್ ಕಾಮತ್,ಅಬ್ದುಲ್ ರಜಾಕ್,ಮುನೀರ್ ಕಾರ್ನಾಡು,ಉದಯ ಶೆಟ್ಟಿ ಆದಿಧನ್,ಸತೀಶ್ ಅಂಚನ್,ಸದಾಶಿವ ಹೊಸದುರ್ಗ,ಬಾಲಚಂದ್ರ ಸನಿಲ್,ಉದಯ ಶೆಟ್ಟಿ ಕಾರ್ನಾಡು ಬೈಪಾಸ್,ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ,ಸುರೇಶ್ ಬಂಗೇರ,ಜೋಯಲ್ ಡಿಸೋಜಾ,ಜಾನ್ ಕ್ವಾಡ್ರಸ್,ಅಶೋಕ್ ಪೂಜಾರ್,ಹರ್ಷರಾಜ್ ಶೆಟ್ಟಿ ಜಿಎಮ್,ನಾರಾಯಣ ಎಮ್. ಮತ್ತಿತರರು ಉಪಸ್ಥಿತರಿದ್ದರು.