ಪಲಿಮಾರು: ರಿಕ್ಷಾ ಚಾಲಕರಿಗೆ ಕಿಟ್ ವಿತರಣೆ, ಗೌರವಾರ್ಪಣೆ

ಪಡುಬಿದ್ರಿ: ಪಲಿಮಾರು ಗ್ರಾಮದಲ್ಲಿ ಮನೆ, ಮನೆಗಳಿಗೆ ಅಕ್ಕಿ ಸಹಿತ ಆಹಾರ ಸಾಮಾಗ್ರಿಗಳನ್ನು ವಿತರಿಸಿದ ಪಲಿಮಾರು ಗ್ರಾಪಂ ಆಡಳಿತವು ಗ್ರಾಮ ವ್ಯಾಪ್ತಿಯ ಪಲಿಮಾರು, ಅಡ್ವೆ, ಅವರಾಲು ಮಟ್ಟಿ, ನಂದಿಕೂರು ಪ್ರದೇಶಗಳ ರಿಕ್ಷಾ ಚಾಲಕ ಮಾಲಕರಿಗೆ ಬುಧವಾರದಂದು ಆಹಾರ ಕಿಟ್‍ಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಪಲಿಮಾರು ಪಶು ವೈದ್ಯಾಧಿಕಾರಿ ಶಿವಪುತ್ರಪ್ಪ ಮತ್ತು ಪಡುಬಿದ್ರಿ ಭಾಗದ ಪತ್ರಕರ್ತರನ್ನು ಪಲಿಮಾರು ಗ್ರಾಪಂ ವತಿಯಿಂದ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಮೋದ್ ಸುವರ್ಣ, ಪಲಿಮಾರು ಗ್ರಾಪಂನ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ಶ್ಲಾಘನೀಯವೆಂದರು.

ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ಪತ್ರಕರ್ತರೂ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದು ಅವರನ್ನು ತಾವು ಗುರುತಿಸಿದ್ದೇವೆ. ಪಶು ವೈದ್ಯಾಧಿಕಾರಿ ಸಹಿತ ಇಲ್ಲಿನ ರಿಕ್ಷಾ ಚಾಲಕರೂ ಲಾಕ್‍ಡೌನ್ ಕಾಲದಲ್ಲೂ ಉತ್ತಮವಾಗಿ ಜನತೆಯೊಂದಿಗೆ ಸ್ಪಂದಿಸಿರುವುದಾಗಿ ಹೇಳಿದರು.

ಪಲಿಮಾರು ಗ್ರಾಪಂ ಉಪಾಧ್ಯಕ್ಷೆ ಸುಮಂಗಲಾ ದೇವಾಡಿಗ, ಗ್ರಾಮ ಕರಣಿಕ ಲೋಕನಾಥ ಲಮಾಣಿ, ಹಿರಿಯ ಪತ್ರಕರ್ತ ರಾಮಚಂದ್ರ ಆಚಾರ್ಯ, ಗ್ರಾ. ಪಂ. ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಪಲಿಮಾರು ಗ್ರಾಪಂ ಪಿಡಿಒ ಸತೀಶ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಫೋಟ್ಯೋ: ಪಲಿಮಾರು ಪಶು ವೈದ್ಯಾಧಿಕಾರಿ ಶಿವಪುತ್ರಪ್ಪರವರನ್ನು ಸನ್ಮಾನಿಸಲಾಯಿತು.