ಪಡಿತರ ಇ-ಕೆವೈಸಿಗಾಗಿ ಪಡುಬಿದ್ರಿ ಕೇಂದ್ರದಲ್ಲಿ ನೂಕುನುಗ್ಗಲು

ಪಡುಬಿದ್ರಿ: ಹೆಬ್ಬೆಟ್ಟಿನ ಗುರುತು ಮೂಡಿಸಿಕೊಂಡು ಇ-ಕೆವೈಸಿ(ನಿಮ್ಮ ಗ್ರಾಹಕರ ತಿಳಿದುಕೊಳ್ಳುವಿಕೆ)ಗಾಗಿ ಪಡುಬಿದ್ರಿಯ ಪಡಿತರ ವಿತರಣಾ ಕೇಂದ್ರದಲ್ಲಿ ಬಿಪಿಎಲ್ ಬಳಕೆದಾರರು ಅತೀ ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸಿದ್ದು, ನೂಕುನುಗ್ಗಲಿನಿಂದ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆದ ಘಟನೆ ಶನಿವಾರ ನಡೆಯಿತು.

ಇ-ಕೆವೈಸಿಗಾಗಿ ಸರಕಾರ ಅಂತಿಮ ಗಡು ವಿಧಿಸಿದ್ದು, ಪಡುಬಿದ್ರಿ ಪಡಿತರ ವಿತರಣಾ ಕೇಂದ್ರದಲ್ಲಿ ನಿತ್ಯ ಬೆಳಿಗ್ಗೆ 40 ಹಾಗೂ ಅಪರಾಹ್ನ 40 ಗ್ರಾಹಕರನ್ನು ಈ ಕ್ರಮಕ್ಕಾಗಿ ಕೂಪನ್ ನೀಡಲಾಗುತ್ತದೆ. ಪಡಿತರ ಕೇಂದ್ರ 9.30ಕ್ಕೆ ತೆರವುದಿದ್ದರೂ ಜನ ಮುಂಜಾನೆ 5 ಗಂಟೆಯಿಂದಲೇ ಬಂದು ಸರದಿಯಲ್ಲಿ ನಿಲ್ಲುತ್ತಾರೆ. ಬಳಿಕ ಏಕಾಏಕಿ ಕೇಂದ್ರಕ್ಕೆ ನುಗ್ಗುವುದಲ್ಲದೆ ಅವರವರೇ ಮಾತಿನ ಚಕಮಕಿ ನಡೆಸಿ ಸಿಬ್ಬಂದಿಯನ್ನೆ ತರಾಟೆಗೆ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.

ಪಡಿತರ ವಿತರಣಾ ಕೇಂದ್ರದಲ್ಲಿ ಸದ್ಯ ಒಂದೇ ಕಂಪ್ಯೂಟರ್ ಮೂಲಕ ಇ-ಕೆವೈಸಿ ಅಪ್‍ಡೇಟ್ ಮಾಡಿಕೊಳ್ಳಲಾಗುತ್ತಿರುವ ಕಾರಣ ನಿಧಾನಗತಿಯಲ್ಲೇ ಕೆಲಸ ಸಾಗಿದೆ. ಅಲ್ಲದೆ ಕೆಲವೊಮ್ಮೆ ಸರ್ವರ್ ಸ್ಥಗಿತಗೊಂಡು ಸಮಸ್ಯೆಗಳೂ ಆಗುತ್ತಿದೆ. ಪಡುಬಿದ್ರಿಯ ಸೇವಾ ಕೇಂದ್ರಗಳಲ್ಲೂ ಇದನ್ನು ಮಾಡಿಸಬಹುದಾಗಿದ್ದು ಅಲ್ಲಿ ಪ್ರತಿಯೊಬ್ಬರು 35ರೂ. ಗಳನ್ನು ನೀಡಬೇಕಾಗಿರುವುದರಿಂದ ಉಚಿತವಾಗಿರುವ ಪಡಿತರ ವಿತರಣಾ ಕೇಂದ್ರದಲ್ಲೇ ಗ್ರಾಹಕರು ಮುಗಿಬೀಳುತ್ತಿದ್ದಾರೆ. ಅದೂ ಈ ತಿಂಗಳಲ್ಲೇ ಇ-ಕೆವೈಸಿಗೆ ಅಂತಿಮ ಗಡುವೆಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹೇಳಿರುವುದರಿಂದ ಗ್ರಾಹಕರ ಒತ್ತಡವೂ ಅಧಿಕವಾಗಿದೆ.
ಹೆಚ್ಚಾದ ಒತ್ತಡಕ್ಕೆ ಒಂದೇ ಇರುವ ಸಿಸ್ಟಮನ್ನು ಹೆಚ್ಚಿಸಿದಲ್ಲಿ ಗ್ರಾಹಕರಿಗೆ ಅನುಕೂಲವೆನಿಸಲಿದೆ. ಪಡುಬಿದ್ರಿ ಕೇಂದ್ರದಲ್ಲಿ ಶನಿವಾರ ಮಧ್ಯಾಹ್ನ ನಂತರ ಸರ್ವರ್ ಸ್ಥಗಿತದಿಂದ ಇ-ಕೆವೈಸಿಗೆ ಬಂದ ಶಾಲಾ ಮಕ್ಕಳು ಸಹಿತ ಹಲವರು ಹತಾಶರಾಗಿ ತೆರಳಬೇಕಾಯಿತು.