ನಡ್ಸಾಲು:ಕೊರೊನಾ ಮಾರ್ಗಸೂಚಿ ಉಲ್ಲಂಘಿಘಿಸಿದವರ ವಿರುದ್ಧ ಪ್ರಕರಣ

ಪಡುಬಿದ್ರಿ: ಕೋವಿಡ್-19 ಮಾರ್ಗಸೂಚಿಗೆ ವಿರುದ್ಧವಾಗಿ ಸೋಂಕು ಹೊಂದಿದ ಸಹೋದರರಿಬ್ಬರು ಸರಕಾರದ ನಿಯಮವನ್ನೂ ಉಲ್ಲಂಘಿಸಿ ತಪ್ಪು ಮಾಹಿತಿ ನೀಡಿದ ಮೇರೆಗೆ ಅವರಿಬ್ಬರ ವಿರುದ್ಧ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೊನಾ ಹರಡದಂತೆ ತಡೆಯಲು ಮಂಜಾಗ್ರತಾ ಕ್ರಮವಾಗಿ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯನ್ನು ಉಲ್ಲಂಘಿಘಿಸಿದ ಆರೋಪ ಇವರಿಬ್ಬರ ಮೇಲಿದೆ.

ಸೋಂಕು ಪೀಡಿತರಾದ ಬಳಿಕ ಜಿಲ್ಲಾಡಳಿತ ಬಯಸಿದ ಯಾವುದೆ ದಾಖಲೆಗಳನ್ನು ನೀಡಿಲ್ಲ. ಅಲ್ಲದೆ ಅಧಿಕಾರಿಗಳು ಪ್ರವಾಸ ದಾಖಲೆ ಕೇಳಿದಾಗ ತಪ್ಪು ಮಾಹಿತಿಗಳನ್ನು ನೀಡಿದ್ದಲ್ಲದೆ ಅವರಿಗೇ ಬೆದರಿಕೆ ಹಾಕಿದ್ದರು. ಬಳಿಕ ಅವರಿಬ್ಬರ ಮೊಬೈಲ್ ದಾಖಲೆಗಳನ್ನು ಪರಿಶೀಲಿಸಿದಾಗ ಅವರಲ್ಲೊಬ್ಬ ಅವಿಭಜಿತ ದಕ ಜಿಲ್ಲೆಯಾದ್ಯಂತ ಸಂಚರಿಸಿದ್ದು ಕಂಡುಬಂದಿತ್ತು.

ರೋಗಿ ಸಂಖ್ಯೆ 10186 ಹಾಗೂ 10187 ಆರೋಪಿಗಳಾಗಿದ್ದು ಇವರು ತಮ್ಮ ಪ್ರಯಾಣದ ವಿವರಗಳನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಕೇಳಿದ್ದಾಗ ಗೌಪ್ಯವಾಗಿರಿಸಿದ್ದರು. ಇದರಿಂದ ಕೊರೊನಾ ನಿಯಂತ್ರಣಕ್ಕೆ ಹಿನ್ನಡೆಯಾಗಿದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆರೋಪಿಗಳು ಹಲವು ಸ್ಥಳಗಳಿಗೆ ಭೇಟಿನೀಡಿ ಅನೇಕ ವ್ಯಕ್ತಿಗಳನ್ನು ಸಂಪರ್ಕಿಸಿರುವುದು ಗೊತ್ತಾಗಿದೆ. ಹಾಗಾಗಿ ಇವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿ ಡಾ.ವಾಸುದೇವ ದೂರು ನೀಡಿದ್ದರು.