ನಡಿಪಟ್ಣ ಕಡಲ್ಕೊರೆತ ಪ್ರದೇಶಕ್ಕೆ 1ಕೋಟಿ ರೂ. ವೆಚ್ಚದ ಶಾಶ್ವತ ತಡೆಗೋಡೆ

ಪಡುಬಿದ್ರಿ: ನಡಿಪಟ್ಣದ ಲೋಕೇಶ್ ಕರ್ಕೇರ ಮನೆ ಬಳಿಯಿಂದ ಮಹೇಶ್ವರಿ ಡಿಸ್ಕೋ ಫಂಡ್ ಚಪ್ಪರದವರೆಗಿನ 130ಮೀಟರ್ ಉದ್ದಕ್ಕೆ 1ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆ ರಚನೆಗೆ ಬಂದರು ಮತ್ತು ಮೀನುಗಾರಿಕಾ ಇಲಾಖಾ ಮಂಜೂರಾತಿ ದೊರೆತಿದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.
ಅವರು ಜು.9ರಂದು ಪಡುಬಿದ್ರಿ ನಡಿಪಟ್ಣ ಪ್ರದೇಶದಲ್ಲಿನ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು.

ಕೈರಂಪಣಿ ಫಂಡ್‍ಗಳ ಸ್ಥಳೀಯ ಮೀನುಗಾರರಿಗೆ ಸಮುದ್ರಕ್ಕಿಳಿಯಲು ಬೇಕಾದ ನಿರ್ದಿಷ್ಟ ಪ್ರದೇಶವನ್ನು ತೆರವು ಬಿಟ್ಟು ಉಳಿದಂತೆ ಇಲ್ಲಿನ 130ಮೀಟರ್ ಪ್ರದೇಶವನ್ನು ಶಾಶ್ವತ ತಡೆಗೋಡೆ ನಿರ್ಮಾಣದ ಮೂಲಕ ರಕ್ಷಿಸಲಾಗುವುದು. ಈ ಎಲ್ಲಾ ಮಾಹಿತಿಗಳನ್ನು ಜಿಲ್ಲಾಧಿಕಾರಿ ಅವರೊಂದಿಗೆ ನಿನ್ನೆಯಷ್ಟೇ ಚರ್ಚಿಸಲಾಗಿದೆ. ಮಳೆಗಾಲದಲ್ಲಿ ಸ್ಥಳೀಯರ ಮನೆ, ತೋಟ ಮತ್ತು ಜಾಗಗಳನ್ನು ರಕ್ಷಿಸಿಕೊಳ್ಳಲು ತುರ್ತು ತಡೆಗೋಡೆ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಮಳೆಗಾಲದ ಬಳಿಕ ಶಾಶ್ವತ ಕಾಮಗಾರಿಯನ್ನು ನಡೆಸಲಾಗುವುದು ಎಂದವರು ಹೇಳಿದರು.

ಸ್ಥಳೀಯರು ಹೆಜಮಾಡಿಯಿಂದ ಪಡುಬಿದ್ರಿಯ ಭಾಗಕ್ಕೆ ಸಂಪರ್ಕ ಸೇತುವೆಯ ನಿರ್ಮಾಣಕ್ಕೆ ಒತ್ತು ನೀಡಬೇಕೆಂದು ಶಾಸಕ ಲಾಲಾಜಿ ಅವರಲ್ಲಿ ಮನವಿ ಮಾಡಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದರು. ಬ್ಲೂ ಫ್ಲ್ಯಾಗ್ ಬೀಚ್‍ಗೆ ಕೇಂದ್ರ ತಂಡದ ಅನುಮೋದನೆಯು ದೊರೆತ ಬಳಿಕ ಈ ಸೇತುವೆ ಕುರಿತಾದ ಯೋಜನಾ ಪ್ರಸ್ತಾವವನ್ನು ಸರಕಾರಕ್ಕೆ ರವಾನಿಸಲಾಗುವುದು. ಆ ಕೇಂದ್ರ ಯೋಜನೆಯ ಜತೆ ಜತೆಗೆ ಈ ಪ್ರದೇಶದ ಅಭಿವೃದ್ಧಿಯನ್ನೂ ಗೈಯ್ಯಲಾಗುವುದು. ಈಗಾಗಲೇ ಶಾಸಕರ ನಿಧಿಯಿಂದ 1ಕೋಟಿ ರೂ. ಗಳ ನಡಿಪಟ್ಣ-ಬ್ಲೂ ಫ್ಲ್ಯಾಗ್ ಬೀಚ್‍ಸಂಪರ್ಕ ರಸ್ತೆಯನ್ನೂ ಈ ಭಾಗಕ್ಕೆ ನೀಡಲಾಗಿದೆ ಎಂದೂ ಶಾಸಕ ಲಾಲಾಜಿ ಮೆಂಡನ್ ತಿಳಿಸಿದರು.

ಶಾಸಕರ ಜತೆಗೆ ಸ್ಥಳೀಯ ಮೀನುಗಾರರು, ಬಂದರು ಹಾಗೂ ಮೀನುಗಾರಿಕಾ ಇಲಾಖಾ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಉದಯ ಕುಮಾರ್, ಸಹಾಯಕ ಇಂಜಿನಿಯರ್ ಜಯರಾಜ್, ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ಮಾಜಿ ಉಡುಪಿ ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್, ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಾಜಿ ಗ್ರಾ.ಪಂ. ಸದಸ್ಯ ಅಶೋಕ್ ಸಾಲ್ಯಾನ್ ಮತ್ತಿತರರಿದ್ದರು.