ಜೇಸಿಐ ಸಂಸ್ಥೆಯಿಂದ ಯುವ ಸಬಲೀಕರಣ-ವೈ.ಸುಕುಮಾರ್

ಎರ್ಮಾಳಿನಲ್ಲಿ ಜೇಸಿಐ ಘಟಕಾಧ್ಯಕ್ಷರುಗಳಿಗೆ ತರಬೇತಿ ಕಮ್ಮಟ

ಪಡುಬಿದ್ರಿ: ಯುವ ಪ್ರತಿಭೆಗಳಿಗೆ ಜೇಸಿಐ ಸಂಸ್ಥೆಯಿಂದ ನಿರಂತರ ತರಬೇತಿಗಳನ್ನು ನಡೆಸುವ ಮೂಲಕ ಸಮಾಜದ ಮುಖ್ಯ ವಾಹಿನಿಯ ಮುಂಚೂಣಿಗೆ ಬರಲು ಸದವಕಾಶ ಕಲ್ಪಿಸಿಕೊಡುತ್ತದೆ ಎಂದು ಜೇಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ವೈ.ಸುಕುಮಾರ್ ಹೇಳಿದರು.

ಜೇಸಿಐ ಪಡುಬಿದ್ರಿಯ ಆತಿಥ್ಯದಲ್ಲಿ ಜೇಸಿಐ ವಲಯ 15ರ ಎಲ್ಲಾ ಘಟಕಾಧ್ಯಕ್ಷರುಗಳಿಗಾಗಿ ಎರ್ಮಾಳು ಹಾಡಿ ಮನೆಯಲ್ಲಿ ಹಮ್ಮಿಕೊಂಡ ರಿವೀವ್ ಟು ರಿಯಾಕ್ಟ್(ಆರ್2ಆರ್) ಮತ್ತು ಮಿಸ್ಟರ್ ಚೇರ್‍ಮೆನ್ ತರಬೇತಿ ಕಮ್ಮಟದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಘಟಕಾಧ್ಯಕ್ಷರುಗಳು ತಮ್ಮ ಕ್ಷೇತ್ರಗಳಲ್ಲಿ ಗಮನ ಸೆಳೆಯುವ ಮೂಲಕ ಸ್ಥಳೀಯ ನಾಯಕರಾಗಿ ಗುರುತಿಸಿಕೊಳ್ಳಲು ಜೇಸಿಐ ಕಾರ್ಯಚಟುವಟಿಕೆಗಳು ಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜೇಸಿಐ ಪೂರ್ವ ವಲಯಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಇನ್ನಾ ಮಾತನಾಡಿ, ಪ್ರತಿಸ್ಪರ್ಧಿಗಳ ಚ್ಯಾಲೆಂಜನ್ನು ಸ್ವೀಕರಿಸಿ ಸಕಾರಾತ್ಮಕವಾಗಿ ಮುನ್ನಡೆದಲ್ಲಿ ಯಶಸ್ಸು ಸಾಧ್ಯ. ನಿರಂತರ ಚಟುವಟಿಕೆಗಳ ಮೂಲಕ ಉತ್ತಮರಾಗಬಹುದು. ಸಿಕ್ಕ ಅಲ್ಪ ಅವಕಾಶಗಳನ್ನು ನಿರ್ಲಕ್ಷಿಸದೆ ಸವಾಲಾಗಿ ಸ್ವೀಕರಿಸಿದರೆ ಪ್ರತಿಯೊಬ್ಬರೂ ಗುರುತಿಸುತ್ತಾರೆ ಎಂದರು.
ಜೇಸಿಐ ಇಂಡಿಯಾದ ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷ ಸದಾನಂದ ನಾವಡರು ಘಟಕಾಧಿಕಾರಿಗಳಿಗೆ ರಿವೀವ್ ಟು ರಿಯಾಕ್ಟ್ ತರಬೇತಿ ನಡೆಸಿಕೊಟ್ಟರು. ಜೇಸಿಐ ವಲಯ 15ರ ಪೂರ್ವ ವಲಯಾಧ್ಯಕ್ಷ ಅರವಿಂದ ರಾವ್ ಕೇದಿಗೆ ಮಿಸ್ಟರ್ ಚೇರ್‍ಮೆನ್ ತರಬೇತಿ ನಡೆಸಿಕೊಟ್ಟರು.

ಜೇಸಿಐ ವಲಯ 15ರ ವಲಯಾಧ್ಯಕ್ಷ ಅಶೋಕ್ ಚೂಂತಾರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಜೇಸಿಐ ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷ ಅನಿಲ್ ಕುಮಾರ್, ವಲಯ ಉಪಾಧ್ಯಕ್ಷ ಮಕರಂದ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿದ್ದರು.
ಆತಿಥೇಯ ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಅನಿಲ್ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ನಿರ್ದೇಶಕರಾದ ಪತ್ರಕರ್ತ ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪ್ರದೀಪ್ ಆಚಾರ್ಯ ವಂದಿಸಿದರು.