ಜನಾಭಿಪ್ರಾಯದ ಮೂಲಕ ಎಲ್ಲೂರಿನಲ್ಲಿ ಘನ ತ್ಯಾಜ್ಯ ಘಟಕಕ್ಕೆ ಮುಂದಾಗಬೇಕು-ಲಾಲಾಲಿ ಮೆಂಡನ್

ಪಡುಬಿದ್ರಿ: ಸಾಧಕ ಬಾಧಕಗಳ ಪರಾಮರ್ಶಿಸಿ, ಜನಾಭಿಪ್ರಾಯ ಸಂಗ್ರಹಿಸಿದ ಬಳಿಕವಷ್ಟೇ ಎಲ್ಲೂರು ಗ್ರಾಮದಲ್ಲಿ ಬೃಹತ್ ಘನ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಜಿಲ್ಲಾಡಳಿತ ಗಮನಹರಿಸಬೇಕು ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.
ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಗ್ರಾಪಂ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುಪಿಸಿಲ್ ಸಿಎಸ್‍ಆರ್ ನಿಧಿಯ ಬಗ್ಗೆ ಸರ್ಕಾರದಿಂದ ಮಾಹಿತಿ ಕೇಳಿದ್ದರೂ ಈವರೆಗೂ ಸಮರ್ಪಕ ವಿವರ ಲಭ್ಯವಾಗಿಲ್ಲ.ಯೋಜನೆಗಾಗಿ ಗ್ರಾಮಸ್ಥರು ಮಾಡಿದ ತ್ಯಾಗಕ್ಕೆ ಇದುವರೆಗೂ ಸಮರ್ಪಕ ಪ್ರತಿಫಲ ಲಭಿಸಿಲ್ಲ. ಸ್ಥಳೀಯರ ಉದ್ಯೋಗದ ಭರವಸೆಗಳು ಈಡೇರಿಲ್ಲ ಎಂದು ಮೆಂಡನ್ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಪಂಗಳಲ್ಲಿ ಆರಂಭಿಸಲಾಗಿರುವ ಬಾಪೂಜಿ ಕೇಂದ್ರಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಕಸ ನಿರ್ವಹಣೆಯನ್ನು ಸವಾಲಾಗಿ ಸ್ವೀಕರಿಸಿ ಕಸಮುಕ್ತ ಗ್ರಾಮವಾಗಿಸಲು ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಮಾರಂಭದ ಮುಖು ಅತಿಥಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಪಂ 3 ಲಕ್ಷ ಅನುದಾನದಿಂದ ನಿರ್ಮಿಸಿದ ಕುಂಜೂರು ದುರ್ಗಾನಗರ ರಸ್ತೆ, ಎಲ್ಲೂರು ಗ್ರಾಪಂ ಬಳಿ 4.50 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಿದ ಎಸ್‍ಎಲ್‍ಆರ್‍ಎಂ ಘಟಕ, 8 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಉಳ್ಳೂರು ಅಂಗನವಾಡಿ ಕೇಂದ್ರ, ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ 12 ಲಕ್ಷ ಅನುದಾನದಲ್ಲಿ ಅದಮಾರು ಬಳಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಲಾಲಾಜಿ ಉದ್ಘಾಟಿಸಿದರು.
ಗ್ರಾಪಂ ಅಧ್ಯಕ್ಷೆ ವಸಂತಿ ಮಧ್ವರಾಜ್ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಸದಸ್ಯೆ ಶಿಲ್ಪಾ ಜಿ ಸುವರ್ಣ, ತಾಪಂ ಸದಸ್ಯ ಕೇಶವ ಮೊಯ್ಲಿ, ಗ್ರಾಪಂ ಉಪಾಧ್ಯಕ್ಷ ಜಯಂತ ಕುಮಾರ್, ಜಿಪಂ ಸಹಾಯಕ ಇಂಜಿನಿಯರ್ ಸುಭಾಷ್ ರೆಡ್ಡಿ, ಶಿಶು ವಿಕಾಸ ಯೋಜನಾಧಿಕಾರಿ ವೀಣಾ ಉಪಸ್ಥಿತರಿದ್ದರು.

ಪಿಡಿಒ ಮಮತಾ ಶೆಟ್ಟಿ ಸ್ವಾಗತಿಸಿದರು. ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಂದ್ರಶೇಖರ ಸಾಲಿಯಾನ್ ವಂದಿಸಿದರು.