ಕ್ವಾರಂಟೈನ್ ಮುಗಿಸಿ ಬಂದ ವ್ಯಕ್ತಿಗೆ ಪಾಸಿಟಿವ್ – ಬೆಳಪು ಸೀಮಿತ ಪ್ರದೇಶ ಸೀಲ್‍ಡೌನ್

ಪಡುಬಿದ್ರಿ: 14 ದಿನ ಕ್ವಾರಂಟೈನ್ ಮುಗಿಸಿ ಮನೆಗೆ ಬಂದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮನೆ ಪರಸರವನ್ನು ಇಲಾಖಾಧಿಕಾರಿಗಳು ಸೀಲ್‍ಡೌನ್ ಮಾಡಿದ್ದಾರೆ.

ಮುಂಬೈಯಿಂದ ಕುಟುಂಬ ಸಮೇತ ಆಗಮಿಸಿದ್ದ ಅವರು ಕಾಪುವಿನ ಸರಕಾರಿ ಕ್ವಾರಂಟೈನ್‍ನಲ್ಲಿ 14 ದಿನ ಇದ್ದರು. ಕ್ವಾರಂಟೈನ್ ಮುಗಿಸಿ ಎರಡು ದಿನದ ಹಿಂದೆ ಬೆಳಪುವಿನ ಮನೆಗೆ ಬಂದಿದ್ದು, ಎರಡು ದಿನಗಳ ಬಳಿಕ ಅವರಿಗೆ ಪಾಸಿಟಿವ್ ಇರುವುದು ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಕಾಪು ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಆರ್‍ಐ ಕೆ.ರವಿಶಂಕರ್, ಶಿರ್ವ ಎಸ್‍ಐ ಶ್ರೀಶೈಲ ಮುರುಗೋಡ, ಬೆಳಪು ಪಿಡಿಒ ಎಚ್.ಆರ್.ರಮೇಶ್, ವಿಎ ಗಣೇಶ್ ಕುಮಾರ್ ಮತ್ತು ಅರುಣ್ ಕುಮಾರ್ ಭಾನುವಾರ ಭೇಟಿ ನೀಡಿ ಮನೆ ಪರಿಸರವನ್ನು ಸೀಲ್‍ಡೌನ್ ಮಾಡಿದ್ದಾರೆ.

ಬೆಳಪು ಗ್ರಾಮದ ಗ್ರಾಮಸ್ಥರಿಗೆ ಮುಂಜಾಗೃತೆ ವಹಿಸುವಂತೆ ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮನವಿ ಮಾಡಿದ್ದಾರೆ.