ಕಾರ್ನಾಡಿನಲ್ಲಿ ಹರೇಕಳ ಹಾಜಬ್ಬರಿಗೆ ಗೌರವ-ಮೆರೆದ ಸರ್ವಧರ್ಮ ಭಾವೈಕ್ಯ ಸಂಗಮ

ಬಪ್ಪನಾಡು ಕ್ಷೇತ್ರ ಸರ್ವಧರ್ಮದ ಸಂಕೇತವಾಗಿದ್ದು ಭಾವೈಕ್ಯತೆಯನ್ನು ಮೆರೆದು ತನ್ನನ್ನು ಗೌರವಿಸಿದ ಸರ್ವ ಧರ್ಮದವರಿಗೂ ಅಭಿನಂದನೆಗಳು. ಬಪ್ಪನಾಡು ದೇವಿಯ ಅನುಗ್ರಹದಿಂದ ಬಡತನ ಇದ್ದವರಿಗೆ ಸಹಾಯ ಮಾಡಲು ಇನ್ನಷ್ಟು ಅವಕಾಶ ದೊರಕಲಿ ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ಹೇಳಿದರು.

ಬುಧವಾರ ರಾತ್ರಿ ಕಾರ್ನಾಡು ಜಂಕ್ಷನ್‍ನಲ್ಲಿ ಹತ್ತು ಸಮಸ್ತರಿಂದ ನಡೆದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ನಡೆದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಅಕ್ಷರ ಸಂತ ಹರೇಕಳ ಹಾಜಬ್ಬರವರನ್ನು ಗೌರವ ಸ್ವೀಕರಿಸಿ ಹಾಜಬ್ಬ ಮಾತನಾಡಿದರು.
ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ಇಂದಿನ ಯುವ ಜನಾಂಗಕ್ಕೆ ಮಾದರಿ. ಹರೇಕಳ ಹಾಜಬ್ಬರವರು ಒಂದೊಂದು ಕಿತ್ತಳೆ ಹಣ್ಣನ್ನು ಮಾರಾಟ ಮಾಡಿ ಊರಿಗೆ ಶಾಲೆ ಕಟ್ಟಿಸಿ ಬಡ ಮಕ್ಕಳಿಗೆ ವಿದ್ಯೆ ನೀಡಿ ದೇಶಕ್ಕೇ ಮಾದರಿಯಾಗಿದ್ದಾರೆ ಎಂದು ಮುಖ್ಯ ಅತಿಥಿ ಬಪ್ಪನಾಡು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕಿಲ್ಪಾಡಿ ಬಂಢಸಾಲೆ ಶೇಖರ ಶೆಟ್ಟಿ ಹೇಳಿದರು.

ಪದವು ಹೈಸ್ಕೂಲು ಪ್ರಿನ್ಸಿಪಾಲ್ ಫ್ರಾನ್ಸಿಸ್ ಕುಟಿನ್ಹೊ ಮಾತನಾಡಿ ಸರಳತೆಯಿಂದ ಜೀವನ ಸಾಗಿಸಿಕೊಂಡು ದೇಶಭಕ್ತಿಯಿಂದ, ತ್ಯಾಗಮನೋಭಾವನೆಯಿಂದ ಪುಟ್ಟ ಹಳ್ಳಿಯಲ್ಲಿ ಹರೇಕಳ ಹಾಜಬ್ಬರು ಮಾಡಿದ ಸಾಧನೆ ಅಪಾರ ಎಂದು ಹೇಳಿದರು.
ಬಪ್ಪನಾಡು ಸರ್ವಧರ್ಮಧ ಭಾವೈಕ್ಯತೆಯ ಬೀಡಾಗಿದ್ದು ಎಲ್ಲರೂ ಹರೇಕಳ ಹಾಜಬ್ಬರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ದೇಶದ ಅಬಿವೃದ್ಧಿ ಸಾಧ್ಯ ಎಂದು ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರÉನ್.ಎಸ್.ಮನೋಹರ ಶೆಟ್ಟಿ ಈ ಸಂದರ್ಭದಲ್ಲಿ ಹೇಳಿದರು.

ಸಭೆಯಲ್ಲಿ ಉದ್ಯಮಿ ಜೀವನ್ ಶೆಟ್ಟಿ, ಸಂತೋಷ್ ಕರ್ಕೇರ, ವಸಂತ್ ಶೆಟ್ಟಿ, ಭುಜಂಗಶೆಟ್ಟಿ, ಶಿವರಾಮ್ ಅಮೀನ್, ಮುಖೇಶ್ ಕೋಟ್ಯಾನ್ ಮತ್ತಿತರರು ಇದ್ದರು. ದಿನೇಶ್ ಕೊಲ್ನಾಡು ಸ್ವಾಗತಿಸಿ ವಂದಿಸಿದರು.
ಫೋಟೋ: ಕ್ಯಾ: ಕಾರ್ನಾಡು ಹತ್ತು ಸಮಸ್ತರ ವತಿಯಿಂದ ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬರವನ್ನು ಗೌರವಿಸಲಾಯಿತು.