ಕಾರು ಢಿಕ್ಕಿ ಹೊಡೆದು ಪಾದಚಾರಿ ಸಾವು

ಪಡುಬಿದ್ರಿ: ರಸ್ತೆ ದಾಟುವ ಸಂದರ್ಭ ಕಾರು ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಧಾರುಣ ಮೃತಪಟ್ಟ ಘಟನೆ ಇಲ್ಲಿ ಠಾಣಾ ವ್ಯಾಪ್ತಿಯ ಎರ್ಮಾಳು ಬಡಾ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಎರ್ಮಾಳು ಬಡಾ ಕಲ್ಯಾಣಿ ಬಾರ್‍ನ ಅಡುಗೆಯವರಾದ ವಿಶ್ವನಾಥ ಸುವರ್ಣ(50) ಮೃತಪಟ್ಟ ದುರ್ದೈವಿ. ಮೂಲತಃ ಕವತ್ತಾರಿನವರಾದ ವಿಶ್ವನಾಥ ಸುವರ್ಣರು ಎರ್ಮಾಳಿನಲ್ಲಿ ಮನೆ ನಿರ್ಮಿಸಿ ಪತ್ನಿ ಮಕ್ಕಳೊಂದಿಗೆ ವಾಸಿಸುತ್ತಿದ್ದರು.

ನಿತ್ಯದ ಕೆಲಸ ನಿರ್ವಹಿಸಿ ಮನೆಗೆ ತೆರಳಲು ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ಉಡುಪಿ ಕಡೆಯಿಂದ ವೇಗವಾಗಿ ಬಂದ ಕಾರು ಅವರಿಗೆ ಢಿಕ್ಕಿ ಹೊಡೆದಿತ್ತು. ಈ ಸಂದರ್ಭ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.