ಕಾಪು ಕ್ಷೇತ್ರಕ್ಕೆ ಕ್ರೀಡಾ ಅಕಾಡೆಮಿ ಅಗತ್ಯತೆ-ಮನೋಹರ ಶೆಟ್ಟಿ

ಪಡುಬಿದ್ರಿಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ
ಪಡುಬಿದ್ರಿ: ಅತೀ ಹೆಚ್ಚು ಕ್ರೀಡಾ ಪ್ರತಿಭೆಗಳನ್ನು ಹೊಂದಿರುವ ಕಾಪು ಕ್ಷೇತ್ರಕ್ಕೆ ಕ್ರೀಡಾ ಅಕಾಡೆಮಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರವು ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ಸಾಯಿರಾಧಾ ಗ್ರೂಪ್ಸ್ ಮುಖ್ಯಸ್ಥರಾದ ಮನೋಹರ ಶೆಟ್ಟಿ ಹೇಳಿದರು.
ಪಡುಬಿದ್ರಿ ಸಾಗರ ವಿದ್ಯಾ ಮಂದಿರ ಶಾಲೆಯಲ್ಲಿ ಶನಿವಾರ ಉಡುಪಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಉಡುಪಿ ವಲಯ ಮತ್ತು ಸಾಗರ ವಿದ್ಯಾಮಂದಿರ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ 2019-20ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಪ್ರೋ ಕಬಡ್ಡಿ ಮಾದರಿಯ ಮ್ಯಾಟ್ ಅಂಗಣವನ್ನು ಉದ್ಘಾಟಿಸಿ ಮಾತನಾಡಿದರು.

ಪಂದ್ಯಾಟವನ್ನು ಉದ್ಘಾಟಿಸಿದ ಉಡುಪಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಮಾತನಾಡಿ, ವ್ಯಾಯಾಮ, ಚುರುಕುತನ ಮತ್ತು ಆತ್ಮ ವಿಶ್ವಾಸದ ಪ್ರತೀಕವಾದ ಕಬಡ್ಡಿ ಆಟಗಾರರು ಸತತ ಅಭ್ಯಾಸದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕೆಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮುಖ್ಯ ಅತಿಥಿಯಾಗಿ ಮಾತನಾಡಿ, ಕ್ರೀಡಾಳುಗಳಿಗೆ ಸೂಕ್ತ ಪ್ರೋತ್ಸಾಹದ ಅಗತ್ಯವಿದ್ದು, ಪ್ರೋತ್ಸಾಹಕರು ಅಗತ್ಯತೆಗಳನ್ನು ಪೂರೈಸಬೇಕೆಂದರು.

ಪಡುಬಿದ್ರಿ ಬೀಡು ಅರಸರಾದ ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳ್ ಮತ್ತು ಕ್ರೀಡಾ ಪ್ರೋತ್ಸಾಹಕರಾದ ಗಾಯತ್ರಿ ರಾವ್ ಮ್ಯಾಟ್ ಅಂಗಣವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಶುಭ ಹಾರೈಸಿದರು.

ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಅಧ್ಯಕ್ಷತೆ ವಹಿಸಿದ್ದು, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜೆ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ ಎಸ್., ಬಿಇಒ ಮಂಜುಳಾ ಕೆ., ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿಗಳಾದ ವಿಶ್ವನಾಥ ಬಾಯರಿ ಉಡುಪಿ, ದತ್ತಾತ್ರೇಯ ನಾಯಕ್ ಕುಂದಾಪುರ, ಭುಜಂಗ ಶೆಟ್ಟಿ ಬ್ರಹ್ಮಾವರ, ಚಂದ್ರಶೇಖರ ಶೆಟ್ಟಿ ಬೈಂದೂರು, ಸಿದ್ದಪ್ಪ ಎಸ್.ಕಾರ್ಕಳ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಆಲ್ವಿನ್ ಅಂದ್ರಾದೆ, ವಿವಿಧ ಅಧಿಕಾರಿಗಳಾದ ಸುದರ್ಶನ್ ನಾಯಕ್, ಸತ್ಯನಾರಾಯಣ, ಕೆನರಾ ಬ್ಯಾಂಕ್ ಶಾಖಾಧಿಕಾರಿ ಸ್ವಾತಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿದ್ದರು.

ಶಾಲಾ ಸಂಚಾಲಕ ಸುಕುಮಾರ್ ಸಿ.ಶ್ರೀಯಾನ್ ಪ್ರಸ್ತಾವಿಸಿದರು. ಮುಖ್ಯೋಪಾಧ್ಯಾಯಿನಿ ಪದ್ಮಶ್ರೀ ಸುರೇಶ್ ರಾವ್ ಸ್ವಾಗತಿಸಿದರು. ವಿನುತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ನಿಕಿತಾ ವಂದಿಸಿದರು.

ಸನ್ಮಾನ: ಶಾಲಾ ವಿದ್ಯಾರ್ಥಿನಿಯಾಗಿದ್ದ ಕಬಡ್ಡಿ ಪಂದ್ಯಾಟದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ ಶೀಬಾ ನಾರಾಯಣ ಕರ್ಕೇರರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲೆಯ 5 ವಲಯಗಳ 20 ತಂಡಗಳು 14 ಮತ್ತು 17 ವಯೋಮಾನದಲ್ಲಿ ಪಂದ್ಯಾಟದಲ್ಲಿ ಭಾಗವಹಿಸಲಿದ್ದು, ಇಲ್ಲಿ ಗೆದ್ದ ತಂಡಗಳ ಪೈಕಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಲ್ಲಿ ರಾಜ್ಯ ತಂಡದ ಆಯ್ಕೆ ನಡೆಯಲಿದೆ ಎಂದು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್ ಎಸ್.ಮಾಹಿತಿ ನೀಡಿದರು.