ಕಲಿಯುಗದಲ್ಲಿ ಜ್ಯೋತಿಷ್ಯಕ್ಕೆ ವಿಶೇಷ ಸ್ಥಾನ ಮಾನ:ಪೇಜಾವರ ಶ್ರೀ

ಮೂಲ್ಕಿ: ದೇಶದ ಆಗು ಹೋಗುಗಳಲ್ಲಿ ಜ್ಯೋತಿಷ್ಯಕ್ಕೆ ವಿಶೇಷ ಸ್ಥಾನಮಾನವಿದ್ದು ಇಂದಿನ ಕಲಿಯುಗದಲ್ಲಿ ಮನುಷ್ಯನ ಜೀವನದಲ್ಲಿ ಜ್ಯೋತಿಷ್ಯ ಹಾಸುಹೊಕ್ಕಾಗಿದೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದರು.
ಅವರು ಉಡುಪಿಯ ಪೇಜಾವರ ಮಠದಲ್ಲಿ ಮೂಲ್ಕಿ ಸಮೀಪದ ಎಸ್‍ಕೋಡಿಯ ತೋಕೂರು ಅವಧೂತ ಓಂ ಶಕ್ತಿ ಆಶ್ರಮದ ಮುಖ್ಯಸ್ಥರಾದ ಉಷಾ ವಿಶ್ವನಾಥಜೀ ದಂಪತಿಗಳನ್ನು ಗೌರವಿಸಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ತೋಕೂರು ಅವಧೂತ ಜ್ಯೋತಿಷಿ ವಿಶ್ವನಾಥ ಭಟ್‍ರವರಿಗೆ `ಜ್ಯೋರ್ತಿಭೂಷಣ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ,ಜ್ಯೋತಿಶಾಸ್ತ್ರದಿಂದ ಬಡವರ ದಿನದಲಿತರ ಸೇವೆ ಮಾಡುತ್ತಿರುವ ಜ್ಯೋರ್ತಿಭೂಷಣ ವಿಶ್ವನಾಥಜೀ ದಂಪತಿಗಳ ಕಾರ್ಯವೈಖರಿ ಶ್ಲಾಘನೀಯವಾಗಿದ್ದು ಅಭಿನಂದಾರ್ಹರು ಎಂದು ಶುಭ ಹಾರೈಸಿದರು.
ಪೇಜಾವರ ಶ್ರೀಗಳಿಂದ ಅಭಿವಂದನೆ ಸ್ವೀಕರಿಸಿ ಜ್ಯೋರ್ತಿಭೂಷಣ ವಿಶ್ವನಾಥಜೀ ಮಾತನಾಡಿ ತನ್ನ ಸಾಧನೆಗೆ ಮಾತಾಪಿತೃಗಳು ಕಾರಣವಾಗಿದ್ದು ಮುಂದಿನ ದಿನಗಳಲ್ಲಿ ಜನಸೇವೆ ಮಾಡುವುದರ ಜೊತೆಗೆ ಭಾರತವನ್ನು ಮಾದರಿ ರಾಷ್ಟ್ರವನ್ನಾಗಿಸಲು ತನ್ನಿಂದಾದಷ್ಟು ಶ್ರಮಿಸುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಮಾತೃಶ್ರೀ ಸಂಸ್ಥೆಯ ಶಾರದಮ್ಮ,ಆಶ್ರಮದ ನಿರ್ದೇಶಕಿ ರಜನಿ ಸಿ.ಭಟ್,ಆಶ್ರಮದ ಸಂಚಾಲಕರಾದ ಪುಷ್ಪಾ ಸಂಪತ್ ಕುಮಾರ್,ವಿಜಯ ಕುಮಾರ್,ಮಾಧ್ಯಮ ಕಾರ್ಯದರ್ಶಿ ಪುನೀತಕೃಷ್ಣ ಉಪಸ್ಥಿತರಿದ್ದರು.

ವಿಜಯ ಕುಮಾರ್ ಸ್ವಾಗತಿಸಿದರು.ಪುನೀತಕೃಷ್ಣ ನಿರೂಪಿಸಿದರು.