ಕರಾವಳಿ ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಮೀನುಗಾರಿಕಾ ಸಚಿವಾಲಯದಿಂದ ಪ್ರಾಮಾಣಿಕ ಪ್ರಯತ್ನ-ಉಮೇಶ್ ಪೋಚಪ್ಪನ್

ಪಡುಬಿದ್ರಿ: ಕರಾವಳಿ ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಮೀನುಗಾರಿಕಾ ಸಚಿವಾಲಯದಿಂದ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ನಿಗಮ(ಎನ್‍ಎಫ್‍ಡಿಬಿ)ದ ಸದಸ್ಯ ಉಮೇಶ್ ಪೋಚಪ್ಪನ್ ಹೇಳಿದರು.

ಬಹುನಿರೀಕ್ಷಿತ ಹೆಜಮಾಡಿ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭ ಅವರು ಮಾಧ್ಯದೊಂದಿಗೆ ಮಾತನಾಡಿದರು.

ಬಂದರು ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಬಿರು ಮಳೆಯ ಕಾರಣ ಹೆಜಮಾಡಿ ಕೋಡಿಯ ಕರಾವಳಿ ಪೋಲಿಸ್ ಕಾವಲು ಪಡೆಯ ಆವರಣದಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದರು.

128 ಕೋಟಿ ರೂ. ವೆಚ್ಚದ ಹೆಜಮಾಡಿ ಬಂದರು ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರವು ಶೇ.50:50 ಪಾಲು ನೀಡಲಿದ್ದು, ಆರಂಭಿಕ ಹಂತವಾಗಿ ಕೇಂದ್ರ ಸರಕಾರವು ಈಗಾಗಲೇ 13.5 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಈ ಬಗ್ಗೆ ಯಾವುದೇ ಮುಂದಡಿ ಇಟ್ಟಿಲ್ಲ. ರಾಜ್ಯ ಸರಕಾರದ ಪಾಲು ಬಿಡುಗಡೆಯೂ ಆಗಿಲ್ಲ.
ಈ ಹಿನ್ನೆಲೆಯಲ್ಲಿ ಉಮೇಶ್ ಪೋಚಪ್ಪನ್ ಭೇಟಿ ಮಹತ್ವ ಪಡೆದಿದ್ದು, ಯೋಜನೆಯ ಬಗ್ಗೆ ಸಮಗ್ರ ವಿವರ ಪಡೆದರು.ಈ ಬಗ್ಗೆ ಕೇಂದ್ರ ಮೀನುಗಾರಿಕಾ ಸಚಿವ ಗಿರಿರಾಜ್ ಸಿಂಗ್‍ರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸುವುದಾಗಿ ಉಮೇಶ್ ಭರವಸೆ ನೀಡಿದರು.
ಸಾಂಪ್ರದಾಯಿಕ ಮೀನುಗಾರರು ಮತ್ತು ಆದಿವಾಸಿ ಮೀನುಗಾರರನ್ನು ಗುರುತಿಸಿ ಅವರಿಗೆ ಹೆಚ್ಚು ಪ್ರೋತ್ಸಾಹ ನೀಡುವ ಯೋಜನೆ ತಕ್ಷಣ ಜಾರಿಗೊಳ್ಳಲಿದೆ ಎಂದ ಅವರು ಅವರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಮೀನುಗಾರಿಕಾ ಸಚಿವಾಲಯ ಕಟಿಬದ್ಧವಾಗಿದೆ ಎಂದರು.

ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ನಿಗಮ(ಎನ್‍ಎಫ್‍ಡಿಬಿ) ಸದಸ್ಯ ಹಾಗೂ ಬಿಜೆಪಿ ಮೀನುಗಾರರ ದಕ ಜಿಲ್ಲಾ ಸಂಚಾಲಕ ಶೋಭೇಂದ್ರ ಸಸಿಹಿತ್ಲುರವರು ಬಂದರು ಯೋಜನೆಗೆ ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಾಲು ಶೆ. 75:25 ಇತ್ತು. ಆದರೆ ಈಗ ಅದು 50:50 ಕ್ಕೆ ಸೀಮಿತಗೊಂಡಿದೆ. ಇದರಿಂದ ರಾಜ್ಯದ ಪಾಲು ಪಡೆಯಲು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಬಡ ಮೀನುಗಾರರ ಬವಣೆಯನ್ನು ಪರಿಗಣಿಸಿ ಈ ಹಿಂದಿನಂತೆಯೇ ಕೇಂದ್ರ ಸರಕಾರವು ಶೇ. 75 ಅಂಶ ನೀಡಬೇಕು. ಈ ಬಗ್ಗೆ ಕೇಂದ್ರ ಮೀನುಗಾರಿಕಾ ಸಚಿವಾಲಯಕ್ಕೆ ಮನವರಿಕೆ ಮಾಡಬೇಕೆಂದು ವಿನಂತಿಸಿದರು. ಈ ಬಗ್ಗೆಯೂ ಕೇಂದ್ರ ಸರಕಾರದ ಗಣನೆಗೆ ತರುವುದಾಗಿ ಉಮೇಶ್ ಭರವಸೆ ನೀಡಿದರು.

ಕರಾವಳಿ ಕಾವಲು ಪೋಲಿಸ್ ಪಡೆಗೆ ರಾಜ್ಯದ ಕರಾವಳಿಯಾದ್ಯಂತ ಮೀನುಗಾರ ಯುವಕರನ್ನು ತಾತ್ಕಾಲಿಕ ನೆಲೆಯಲ್ಲಿ ನಿಯೋಜನೆಗೊಳಿಸಲಾಗಿದೆ. ಅವರಿಗೆ ಉದ್ಯೋಗ ಖಾತ್ರಿ ಮತ್ತು ಜೀವನ ಭದ್ರತೆಗೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕೆಂದು ಶೋಭೇಂದ್ರ ಸಸಿಹಿತ್ಲು ಆಗ್ರಹಿಸಿದರು. ಈ ಬಗ್ಗೆ ಕರಾವಳಿ ಕಾವಲು ಪಡೆಯ ಮುಖ್ಯಸ್ಥರ ಮೂಲಕ ಕೇಂದ್ರ ಮೀನುಗಾರಿಕಾ ಸಚಿವರಿಗೆ ಸಂಬಂಧಿತರು ಮನವಿ ಮಾಡಿಕೊಳ್ಳಬೇಕು. ಈ ಬಗ್ಗೆ ತಾನೂ ಸಚಿವರನ್ನು ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ದೇಶದಾದ್ಯಂತ ಮೀನುಗಾರಿಕಾ ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಹಲವಾರು ದೂರಗಾಮೀ ಯೋಜನೆಗಳನ್ನು ಜಾರಿಗೆ ತರಲಿದೆ. ಇದೇ ಹಿನ್ನೆಲೆಯಲ್ಲಿ ತಾನು ಕರಾವಳಿಯಾದ್ಯಂತ ಪ್ರವಾಸ ಕೈಗೊಂಡು ಮೀನುಗಾರ ಮುಖಂಡರುಗಳೊಂದಿಗೆ ಚರ್ಚಿಸುತ್ತಿದ್ದೇನೆ ಎಂದ ಅವರು ಪ್ರತಿ ಗ್ರಾಮದಲ್ಲಿ ಸೇವಾ ಮನೋಭಾವದ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಗುರುತಿಸಿ ಅವರಿಗೆ ಮೀನುಗಾರಿಕೆಯ ಬಗ್ಗೆ ವಿಶೇಷ ತರಬೇತಿ ನೀಡಲು ಯೋಜನೆ ಸಿದ್ಧಗೊಂಡಿದೆ ಎಂದ ಅವರು ಈ ಬಗ್ಗೆ ಅರ್ಹರನ್ನು ಗುರುತಿಸುವಂತೆ ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್‍ಗೆ ಸೂಚಿಸಿದರು.

ಸಾಂಪ್ರದಾಯಿಕ ಮೀನುಗಾರರು ಮತ್ತು ಆದಿವಾಸಿ ಮೀನುಗಾರರನ್ನು ಗುರುತಿಸಿ ಅವರಿಗೆ ಹೆಚ್ಚು ಪ್ರೋತ್ಸಾಹ ನೀಡುವ ಯೋಜನೆ ತಕ್ಷಣ ಜಾರಿಗೊಳ್ಳಲಿದೆ ಎಂದ ಅವರು ಅವರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಮೀನುಗಾರಿಕಾ ಸಚಿವಾಲಯ ಕಟಿಬದ್ಧವಾಗಿದೆ ಎಂದರು.

ಮೀನುಗಾರರ ಸಂಕಷ್ಟ ನಿಧಿಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಬಗ್ಗೆ ಶೋಭೇಂದ್ರ ಸಸಿಹಿತ್ಲು, ಉಮೇಶ್‍ರವರ ಗಮನ ಸೆಳೆದು ಈ ಬಗ್ಗೆ ತಾರತಮ್ಯ ಅನುಸರಿಸದೆ ಎಲ್ಲರಿಗೂ ಒಂದೇ ರೀತಿಯ ಪರಿಹಾರ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಬೇಕೆಂದು ವಿನಂತಿಸಿದರು.

ಹೆಜಮಾಡಿಯ ಕರಾವಳಿ ಕಾವಲು ಪೋಲಿಸ್ ಪಡೆಗೆ ಸುಸಜ್ಜಿತ ಸ್ಪೀಡ್ ಬೋಟ್ ನೀಡುವ ಬಗ್ಗೆಯೂ ಅವರ ಗಮನ ಸೆಳೆಯಲಾಯಿತು.

ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹೆಜಮಾಡಿ ಏಳೂರು ಮೊಗವೀರ ಮಹಾಸಭಾ ಅಧ್ಯಕ್ಷ ಸದಾಶಿವ ಕೋಟ್ಯಾನ್, ಗ್ರಾಪಂ ಸದಸ್ಯ ಶೈಲೇಶ್ ಕುಮಾರ್, ಪಾಂಡುರಂಗ ಕರ್ಕೇರ, ಶರಣ್ ಕುಮಾರ್ ಮಟ್ಟು, ಅಶೋಕ್ ಮಂಗಳೂರು, ಶಶಾಂಕ್ ಮತ್ತಿತರರು ಉಪಸ್ಥಿತರಿದ್ದರು