ಕರಾವಳಿಯಲ್ಲಿ ಹಸಿರು ವರ್ಣದ ಸಮುದ್ರ ನೀರು: ಭಯ ಪಡದಂತೆ ಮನವಿ

ಪಡುಬಿದ್ರಿ: ಕಳೆದೊಂದು ವಾರದಿಂದ ಕರಾವಳಿಯ ಸಮುದ್ರ ನೀರು ಹಸಿರು ವರ್ಣಕ್ಕೆ ತಿರುಗಿದ್ದು,ಮೀನುಗಾರರ ಸಹಿತ ಸಮುದ್ರಕ್ಕಿಳಿಯುವವರು ಯಾವುದೋ ರಾಸಾಯನಿಕ ಸಮುದ್ರ ನೀರಿಗೆ ಬಿದ್ದಿರಬೇಕೆಂದು ಶಂಕಿಸಿದ್ದು,ಮಂಗಳೂರು ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಯಾವುದೇ ಭಯಪಡದಿರುವಂತೆ ಮನವಿ ಮಾಡಿದ್ದಾರೆ.

ಮಳೆಗಾಲ ಮುಗಿದ ಬಳಿಕ ಸಮುದ್ರ ನೀರಿನ ನ್ಯೂಟ್ರನ್ಸ್‍ಗಳಲ್ಲಿ ಆಗುವ ವ್ಯತ್ಯಯದಿಂದ ಈ ರೀತಿಯ ಸಮಸ್ಯೆ ಕಂಡುಬರುತ್ತದೆ.ಇದಕ್ಕೆ ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಈ ನೀರಿನಲ್ಲಿ ಆಮ್ಲಜನಕ ಕಡಿಮೆಯಾಗುವುದು ಸಹಜ.ಅದರಲ್ಲಿನ ವ್ಯತ್ಯಯದಿಂದ ಅಧಿಕ ಗ್ಯಾಸ್ ಉತ್ಪತ್ತಿಯಾಗುತ್ತದೆ.ಇದರಿಂದ ಸಮುದ್ರ ಜಲಚರಗಳಿಗೆ ಅಥವಾ ಸಮುದ್ರ ಸ್ನಾನ ಮಾಡುವವರಿಗೆ ಯಾವುದೇ ಸಮಸ್ಯೆಯುಂಟಾಗದು ಎಂದವರು ಹೇಳಿದ್ದಾರೆ.ಇವುಗಳನ್ನು ಸಸ್ಯ ಸೂಕ್ಷ್ಮಾಣು

ಜೀವಿಗಳು(ಸಿಎಚ್‍ವೈಸಿಒ ಪಿಎಲ್‍ಎಎನ್‍ಕೆಟಿಒಎನ್) ಎಂದು ಗುರುತಿಸಲಾಗಿದೆ.
ನೀರಿನ ಆಳ ಕಡಿಮೆ ಇರುವಲ್ಲಿ ಇದು ಹೆಚ್ಚು ಪ್ರಮಾಣದಲ್ಲಿ ಕಂಡು ಬರುತ್ತದೆ.ಮೀನುಗಳಿಗೆ ಆಮ್ಲಜನಕದ ಕೊರತೆಯುಂಟಾಗುವುದಾದರೂ ಅವುಗಳು ಈ ಹಸಿರು ನೀರನ್ನು ತಪ್ಪಿಸಿ ಬೇರೆ ಸೂಕ್ತ ಜಾಗ ಅರಸಿ ಹೋಗುವ ಕಾರಣ ಜಲಚರಗಳಿಗೆ ಯಾವುದೇ ಸಮಸ್ಯೆ ಉಂಟಾಗದು ಎಂದು ಕೇಂದ್ರದ ಹಿರಿಯ ವಿಜ್ಞಾನಿಗಳಾದ ಡಾ.ಪ್ರತಿಭಾ ರೋಹಿತ್ ಮತ್ತು ಡಾ.ರಾಜೇಶ್ ಕೆಎಮ್ ತಿಳಿಸಿದ್ದಾರೆ.

ಸಮುದ್ರದಲ್ಲಿ ಹಸಿರು(ಪಾಚಿ ತರಹ) ನೀರು ಕಂಡು ಬಂದ ಬಳಿಕ 8-10 ದಿನಗಳಲ್ಲಿ ಅದು ತಾನಾಗಿಯೇ ಕರಗೆ ಹೋಗಲಿದೆ.ಹಾಗಾಗಿ ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದವರು ಮಾಹಿತಿ ನೀಡಿದ್ದಾರೆ.

ಶನಿವಾರ ಅತೀ ಹೆಚ್ಚು ಪಾಚಿ ನೀರು ಕಂಡು ಬಂದ ಎರ್ಮಾಳು,ಉಚ್ಚಿಲ,ಕಾಪು ಪ್ರದೇಶಗಳಲ್ಲಿ ಹೆಚ್ಚು ಮೀನುಗಳು ಮೀನುಗಾರರಿಗೆ ದೊರಕಿವೆ.ಎರ್ಮಾಳು ತೆಂಕ ಮತ್ತು ಬಡಾ ಗ್ರಾಮಗಳಲ್ಲಿ ಕೈರಂಪಣಿಗಳಿಗೆ ಹೇರಳ ಮತ್ಸ್ಯ ಸಂಪತ್ತು ದೊರಕಿರುವುದಾಗಿ ಅವರು ದೃಢಪಡಿಸಿದ್ದಾರೆ.

ಊಹಾಪೋಹ: ಶನಿವಾರದಂದು ಕರಾವಳಿಯ ಹಲವೆಡೆ ಅಮವಾಸ್ಯೆ ಆಚರಣೆ ಇದ್ದ ಕಾರಣ ಸಹಸ್ರಾರು ಭಕ್ತರು ಸಮುದ್ರ ಸ್ನಾನಕ್ಕಾಗಿ ಆಗಮಿಸಿದ್ದರು.ಆದರೆ ಸಮುದ್ರದಲ್ಲಿ ಕೆಲವೆಡೆ ಭಾರೀ ಪ್ರಮಾಣದಲ್ಲಿ ಪಾಚಿ ನೀರು ಇದ್ದ ಕಾರಣ ಅನೇಕರು ಸಮುದ್ರ ಸ್ನಾನ ಮಾಡಲು ಹಿಂಜರಿದರು.ಹಲವರು ಇದು ಬೃಹತ್ ಕೈಗಾರಿಕೆಗಳ ರಾಸಾಯನಿಕ ಎಂದು ಅವರನ್ನು ಹೆದರಿಸಿದ್ದರು ಎಂದು ಹಲವರು ಮಾಹಿತಿ ನೀಡಿದ್ದಾರೆ.

ಕಳೆದ ಒಂದು ವಾರದಿಂದ ಈ ರೀತಿಯ ಪಾಚಿ ನೀರು ಕರಾವಳಿ ಭಾಗದ ಸಮುದ್ರು ನೀರಿನಲ್ಲದೆ ಮೂಲ್ಕಿಯ ಶಾಂಭವಿ ಹೊಳೆಯಲ್ಲೂ ಕಂಡುಬಂದಿತ್ತು.ಆದರೆ ಕಂಡು ಬಂದ ಮರುದಿನವೇ  ಅದು ನಾಪತ್ತೆಯಾಗಿತ್ತು ಎಂದು ಸ್ಥಳೀಯ ಮೀನುಗಾರರು ಹೇಳಿದ್ದಾರೆ