ಎಸ್‍ಎಸ್‍ಎಲ್‍ಸಿ ಪರೀಕ್ಷೆ ತಯಾರಿ ಬಗ್ಗೆ ಜಿಪಂ ತಂಡ ಪರಿಶೀಲನೆ

ಪಡುಬಿದ್ರಿ: ಕೋವಿಡ್ 19 ಮಹಾಮಾರಿ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಜೂನ್ 25ರಂದು ಆರಂಭಗೊಳ್ಳಲಿದ್ದು ಪರೀಕ್ಷೆಯ ಪೂರ್ವ ತಯಾರಿ ಬಗ್ಗೆ ಉಡುಪಿ ಜಿಪಂ ತಂಡ ಅದಮಾರು ಪೂರ್ಣಪ್ರಜ್ಞ ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಕಾಪು ತಾಲೂಕಿನ ಅದಮಾರಿನ ಪೂರ್ಣಪ್ರಜ್ಞಾ ಸಂಸ್ಥೆಗೆ ಆಗಮಿಸಿದ ಜಿಪಂ ಅಧ್ಯಕ್ಷ ದಿನಕರ ಬಾಬು ಅವರ ತಂಡ ಸಂಸ್ಥೆಯಲ್ಲಿ ಪರೀಕ್ಷಾ ಪೂರ್ವವಾಗಿ ನಡೆದ ತಯಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪರೀಕ್ಷೆ ನಡೆಯಲಿರುವ ಎಲ್ಲಾ ಕೋಣೆಗಳಿಗೆ ಭೇಟಿ ನೀಡಿ, ಅಲ್ಲಿಯ ಶುಚಿತ್ವದ ಬಗ್ಗೆ ಶಾಲಾ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದರು.
ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿರುವ ಎಲ್ಲಾ ಕೋಣೆಗಳನ್ನು ನೀರಿನಿಂದ ತೊಳೆದು ಸ್ಯಾನಿಟರೈಸ್ ಮಾಡಲಾಗಿದೆ. ಶೌಚಾಲಯ ಸಹಿತ ಎಲ್ಲಾ ಕಡೆಯಲ್ಲೂ ಶುಚಿತ್ವಕ್ಕೆ ಮಹತ್ವ ನೀಡಲಾಗಿತ್ತು. ಈ ಎಲ್ಲಾ ಪ್ರಕ್ರಿಯೆಯನ್ನು ದಿನಕರ ಬಾಬು ಮತ್ತು ಅವರ ತಂಡ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಮಾಧ್ಯಮದೊಂದಿಗೆ ದಿನಕರ ಬಾಬು ಮಾತನಾಡಿ, ಈ ತಿಂಗಳ 25ರಂದು ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಜಿಲ್ಲೆಯ ಎಲ್ಲೆಲ್ಲಿ ನಡೆಯಲಿದೆಯೋ ಅಲ್ಲಿಗೆ ತೆರಳಿ ಅಲ್ಲಿಯ ಪೂರ್ವ ತಯಾರಿಯನ್ನು ವೀಕ್ಷಣೆ ಮಾಡಿದ್ದೇವೆ. ಈಗಾಗಲೇ ಕಟಪಾಡಿ ಹಾಗೂ ಅದಮಾರು ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ್ದೇನೆ. ಈ ಶಾಲೆಗಳು ಉತ್ತಮ ಸೌಕರ್ಯವನ್ನು ಹೊಂದಿದ್ದು, ಯಾವುದೇ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಗಳು ಆಗುವುದಿಲ್ಲ ಎಂದು ಮನದಟ್ಟಾಗಿದೆ. ಪಾಲಕರು ಧೈರ್ಯದಿಂದ ತಮ್ಮ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಬಹುದು. ಸಾರ್ವಜನಿಕ ಶಿಕ್ಷಣಾ ಇಲಾಖೆಯು ಈಗಾಗಲೇ ಮಾರ್ಗದರ್ಶಿ ಸೂತ್ರವನ್ನು ಕಳುಹಿಸಿದ್ದು, ಅದನ್ನು ಎಲ್ಲಾ ಶಾಲೆಗಳು ಅನುಸರಿಸುತ್ತ್ತಿರುವುದು ಸಂತಸ ತಂದಿದೆ ಎಂದರು.

ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ವಿದ್ಯಾಂಗ ಇಲಾಖಾ ಅಧಿಕಾರಿಗಳಾದ ರಾಘರಾಮ್, ಪ್ರಭಾಕರ ಮಿತ್ತಾಂತ, ಕೃಷಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸಮೀತ್ ಶೆಟ್ಟಿ, ಪೂರ್ಣಪ್ರಜ್ಞ ಸಂಸ್ಥೆಯ ಪ್ರಾಂಶುಪಾಲ ರಾಮಕೃಷ್ಣ ಪೈ, ಉಪ ಪ್ರಾಂಶುಪಾಲೆ ಡಾ. ಒಲಿವಿಟ ಡಿಸೋಜಾ, ಶಾಲಾ ಮುಖ್ಯೋಪಾಧ್ಯಾಯ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.