ಉಡುಪಿ-ದಕ ಜಿಲ್ಲಾ ಚೆಕ್‍ಪೋಸ್ಟ್‍ನಲ್ಲಿ ಸೂಕ್ತ ವ್ಯವಸ್ಥೆ

ಪಡುಬಿದ್ರಿ: ಮುಂಬಯಿ, ಗುಜರಾತ್, ಗೋವಾ ಮತ್ತಿತರ ಹೊರ ರಾಜ್ಯಗಳಿಂದ ಆಗಮಿಸುವವರಿಗೆ ಹೆಜಮಾಡಿಯ ಗಡಿಭಾಗ ದಕ ಜಿಲ್ಲಾ ಚೆಕ್‍ಪೋಸ್ಟ್‍ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಅನುಕೂಲವಾಗುವಂತೆ ಸೂಕ್ತ ಸೌಲಭ್ಯ ಕಲ್ಪಿಸಲಾಗಿದೆ.
ಸೌಲಭ್ಯಗಳ ಕೊರತೆ ಬಗ್ಗೆ ಪತ್ರಿಕಾ ವರದಿಗಳನ್ನು ಆಧರಿಸಿ ಜಿಲ್ಲಾಡಳಿತವು ಶಾಮಿಯಾನ, ತಗಡು ಚಪ್ಪರಗಳನ್ನು ಅಳವಡಿಸಿ ಶನಿವಾರದಂದು ಮತ್ತಷ್ಟು ಸ್ಥಳಾವಕಾಶವನ್ನು ಕಲ್ಪಿಸಿದೆ. ದ.ಕ., ಚೆಕ್‍ಪೆÇೀಸ್ಟ್ ಪ್ರದೇಶಕ್ಕೆ ಶನಿವಾರ ಮಂಗಳೂರು ಡಿಸಿಪಿ ಆರುಣಾಂಶು ಗಿರಿ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆಯನ್ನು ನಡೆಸಿದರು. ಮೂಲ್ಕಿ ತಹಶೀಲ್ದಾರ್ ಮಾಣಿಕ್ಯ ಎಮ್., ವೃತ್ತ ನಿರೀಕ್ಷಕ ಜಯರಾಮೇ ಗೌಡ, ಎಸ್‍ಐ ಶೀತಲ್ ಅಲಗೂರು, ಕಂದಾಯ ನಿರೀಕ್ಷಕ ಪ್ರದೀಪ್ ರೋಡ್ಕರ್, ಗ್ರಾಮ ಕರಣಿಕ ಪ್ರದೀಪ್ ಶೆಣೈ, ಆರೋಗ್ಯ ನಿರೀಕ್ಷಕ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಚೆಕ್‍ಪೋಸ್ಟ್‍ನಲ್ಲಿ ಕ್ವಾರಂಟೈನ್ ಗೊಂದಲ: ಕೇರಳದಿಂದ ರೈಲಿನಲ್ಲಿ ಮಂಗಳೂರಿಗೆ ಬಂದು ತಂದೆಯೊಂದಿಗೆ ಬೈಕ್‍ನಲ್ಲಿ ಉಡುಪಿ ಜಿಲ್ಲೆ ಪ್ರವೇಶಿಸಿದ ಯುವತಿಯೋರ್ವಳು ಹೆಜಮಾಡಿ ಚೆಕ್‍ಪೋಸ್ಟ್‍ನಲ್ಲಿ ಕ್ವಾರೆಂಟೈನ್‍ಗೆ ಒಳಪಡುವ ಅರ್ಜಿಯನ್ನು ಭರ್ತಿ ಮಾಡಿ ನೇರವಾಗಿ ಕುಂದಾಪುರಕ್ಕೆ ತೆರಳಿದ ಘಟನೆ ಗೊಂದಲಕ್ಕೆ ಕಾರಣವಾಯಿತು. ಅನ್ಯ ರಾಜ್ಯದಿಂದ ಬರುವವರನ್ನು ಕ್ವಾರಂಟೈನ್‍ಗೊಳಪಡಿಸಿದ ಬಳಿಕ ಪೊಲೀಸ್ ಬೆಂಗವಾಲು ವಾಹನ ಮೂಲಕ ಅವರ ಕ್ವಾರಂಟೈನ್ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. ಆದರೆ ತಪಾಸಣಾ ಅಧಿಕಾರಿ, ಸಿಬ್ಬಂದಿಗಳ ನಿರ್ಲಕ್ಷದಿಂದ ಯುವತಿ ನೇರ ಮನೆ ಕಡೆ ತೆರಳಿದ ಬಳಿಕ ಎಚ್ಚೆತ್ತ ಅಧಿಕಾರಿಗಳು ಆಕೆಯ ಪತ್ತೆಗೆ ಶ್ರಮಿಸಿದಾಗ ಮೊಬೈಲ್ ನಾಟ್ ರೀಚೆಬಲ್ ಆಗಿರುವುದು ಗಲಿಬಿಲಿಗೆ ಕಾರಣವಾಯಿತು. ಮಧ್ಯಾಹ್ನದ ವೇಳೆ ಯುವತಿ ಮನೆ ಸೇರಿದ ಬಗ್ಗೆ ಮಾಹಿತಿ ಲಭ್ಯವಾಯಿತು. ಅ ವೇಳೆಗಾಗಲೇ ಕುಂದಾಪುರ ತಹಶೀಲ್ದಾರ್ ಯುವತಿಗೆ ಕರೆ ಮಾಡಿ ಕ್ವಾರೆಂಟೈನ್ ತಪ್ಪಿಸಿ ಬಂದಿರುವ ಬಗ್ಗೆ ಪ್ರಕರಣ ದಾಖಲಿಸುವುದಾಗಿಯೂ ತಿಳಿಸಿದ್ದರು. ಇತ್ತ ತಪಾಸಣಾ ಕೇಂದ್ರದ ಸಿಬ್ಬಂದಿ ಇಲ್ಲಿ ನಡೆದಿರುವ ಗೊಂದಲದ ಬಗ್ಗೆ ತಹಶೀಲ್ದಾರ್‍ಗೆ ವಿವರಿಸಿದರು. ಬಳಿಕ ತಹಶೀಲ್ದಾರ್ ಯುವತಿಯನ್ನು ಕೋಟೇಶ್ವರದ ಕ್ವಾರೆಂಟೈನ್ ಸ್ಥಳಕ್ಕೆ ಬರುವಂತೆ ಸೂಚಿಸಿದ್ದಾರೆ. ಅದೇ ಸಮಯಕ್ಕೆ ಯುವತಿ ಮನೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮತ್ತು ಆಶಾ ಕಾರ್ಯಕರ್ತೆಯರು ಮನೆಯಲ್ಲಿಯೇ ಇರುವಂತೆ ತಾಕೀತು ಮಾಡಿದ್ದಲ್ಲದೆ, ಭಾನುವಾರ ಮನೆ ಭೇಟಿ ನೀಡುವುದಾಗಿಯೂ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೋಮ್ ಕ್ವಾರಂಟೈನ್: ಕೊರೊನಾ ಪಾಸಿಟಿವ್ ಹೊಂದಿದ ಸುರತ್ಕಲ್ ಗುಡ್ಡೆಕೊಪ್ಲ ಮಹಿಳೆ ತಪಾಸಣೆಗೊಳಪಟ್ಟ ಸುರತ್ಕಲ್‍ನ ಖಾಸಗಿ ನರ್ಸಿಂಗ್ ಹೋಂನಲ್ಲಿ ಕರ್ತವ್ಯ ನಿರ್ವಹಿಸಿದ್ದ ಪಡುಬಿದ್ರಿ ಮೂಲದ ದಾದಿಯರಿಬ್ಬರಿಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಹೋಂ ಕ್ವಾರೆಂಟೈನ್‍ಗೆ ನಿರ್ದೇಶಿಸಿದೆ.

ಈ ಇಬ್ಬರು ದಾದಿಯರೂ ರಾತ್ರಿ ಪಾಳಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದ್ದರು. ಕೊರೊನಾ ಪಾಸಿಟಿವ್ ಆಗಿರುವ ಸುರತ್ಕಲ್ ಮೂಲದ ಮಹಿಳೆಯ ಪ್ರಾಥಮಿಕ ಸಂಪರ್ಕವನ್ನು ಇವರು ಹೊಂದಿಲ್ಲ. ಹಾಗಾಗಿ ಇವರನ್ನು ಮನೆಯಲ್ಲೇ ಕ್ವಾರಂಟೈನ್ ಅವಧಿ ಪೂರೈಸುವಂತೆ ತಿಳಿಸಲಾಗಿರುವುದಾಗಿ ವರದಿಯಾಗಿದೆ.

ಫೋಟೋ ದಕ್ಷಿಣಕನ್ನಡ ಜಿಲ್ಲಾ ಪ್ರವೇಶಿಸುವ ಹೆಜಮಾಡಿ ಚೆಕ್‍ಪೋಸ್ಟ್‍ಗೆ ದಕ್ಷಿಣಕನ್ನಡ ಜಿಲ್ಲಾ ಡಿಸಿಪಿ ಸಿಪಿ ಆರುಣಾಂಶು ಗಿರಿ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆಯನ್ನು ನಡೆಸಿದರು. ವೃತ್ತ ನಿರೀಕ್ಷಕ ಜಯರಾಮಗೌಡ ಮತ್ತಿತರು ಇದ್ದರು.