ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಸುರಕ್ಷಿತ ಜಿಲ್ಲೆ-ಲಾಲಾಜಿ ಆರ್.ಮೆಂಡನ್

ಪಡುಬಿದಿ: ಈ ಬಾರಿ ರಾಜ್ಯದಾದ್ಯಂತ ಪ್ರಕೃತಿ ವಿಕೋಪದಿಂದ ರಾಜ್ಯದ ಎಲ್ಲೆಡೆ ಪರಿಸ್ಥಿತಿ ಕೈಮೀರಿದ ಹಂತ ತಲುಪಿದ್ದರೂ ಉಡುಪಿ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ನಷ್ಟ ಸಂಭವಿಸಿದ್ದು, ಉಡುಪಿ ಸುರಕ್ಷಿತ ಜಿಲ್ಲೆಯಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಹೆಜಮಾಡಿ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಪ್ರಥಮ ಗ್ರಾಮ ಸಭೆ ಮಂಗಳವಾರ ಹೆಜಮಾಡಿಯ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಸಂದರ್ಭ ಲಾಲಾಜಿ ಮೇಂಡನ್ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಈ ಬಾರಿ ಪ್ರಕೃತಿ ವಿಕೋಪದಿಂದ ಸಂಪೂರ್ಣ ಮನೆ ನಾಶವಾದವರಿಗೆ ಹೊಸ ಮನೆ ಕಟ್ಟಿಸಿಕೊಡಲು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದು, ಮೀನುಗಾರ ಮಹಿಳೆಯರ ರೂ.50ಸಾವಿರದವರೆಗಿನ ಸಂಪೂರ್ಣ ಸಾಲ ಮನ್ನಾಕ್ಕೆ ಅನುಮತಿ ನೀಡಿದ್ದಾರೆ. ಎಲ್ಲೆಡೆ ಸಮಸ್ಯೆಯಾಗಿರುವ ಕಸ ವಿಲೇವಾರಿಗೆ ಸಾರ್ವಜನಿಕರ ಸಹಕಾರದ ಅಗತ್ಯವಿದೆ. ಸ್ವಯಂಸೇವಕರಾಗಿ ತ್ಯಾಜ್ಯ ವಿಲೇವಾರಿಗೆ ಮುಂದೆ ಬರಬೇಕಾಗಿದೆ. ಹಲವು ಸಂದರ್ಭಗಳಲ್ಲಿ ಸಾರ್ವಜನಿಕ ಆಕ್ಷೇಪಗಳ ಕಾರಣ ತ್ಯಾಜ್ಯ ವಿಲೇವಾರಿ ಸಹಿತ ಅಭಿವೃದ್ಧಿ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ನಮ್ಮ ಕಸವನ್ನು ನಾವೇ ವಿಲೇವಾರಿ ಮಾಡಲು ಹೆಚ್ಚು ಒತ್ತು ನೀಡಬೇಕು ಎಂದರು.
ಮತ್ಸ್ಯಾಶ್ರಯ ಯೋಜನೆಯನ್ನು ರಾಜೀವಗಾಂಧಿ ನಿಗಮದೊಂದಿಗೆ ವಿಲೀನ ಮಾಡಿದ್ದು, ಅದನ್ನು ಮೀನುಗಾರಿಕಾ ಇಲಾಖೆಗೆ ಮರು ವಿಲೀನಗೊಳಿಸುವಂತೆ ಉಪಾಧ್ಯಕ್ಷ ಸುಧಾಕರ ಕರ್ಕೇರ ಶಾಸಕರಲ್ಲಿ ಮನವಿ ಮಾಡಿದರು.

ಹೆಜಮಾಡಿಗೆ ನೂತನ ವಿದ್ಯುತ್ ಫೀಡರ್: ಕಳೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಆಗ್ರಹದಂತೆ ಹೆಜಮಾಡಿ ಗ್ರಾಮದ ಒತ್ತಡವನ್ನು ಪರಿಗಣಿಸಿ ಗ್ರಾಪಂ ವತಿಯಿಂದ ವಿದ್ಯುತ್ ಇಲಾಖೆಗೆ ಪ್ರತ್ಯೇಕ ವಿದ್ಯುತ್ ಫೀಡರ್‍ಗಾಗಿ ಮನವಿ ಸಲ್ಲಿಸಲಾಗಿದ್ದು, ಅದರಂತೆ ಈ ಬಾರಿ ವಿದ್ಯುತ್ ಫೀಡರ್ ಮಂಜೂರಾಗಿದೆ ಎಂದು ಪಡುಬಿದ್ರಿ ಮೆಸ್ಕಾಂ ಶಾಖಾಧಿಕಾರಿ ಸುಧೀರ್ ಪಠೇಲ್ ತಿಳಿಸಿದರು. ನಂದಿಕೂರಿನಿಂದ ಅವವರಾಲುಮಟ್ಟು, ಬೋರುಗುಡ್ಡೆ ಮೂಲಕ ವಿದ್ಯುತ್ ಫೀಡರ್ ಅಳವಡಿಸಲು ಕ್ರಿಯಾ ಯೋಜನೆ ಮಾಡಲಾಗಿದೆ ಎಂದವರು ಮಾಹಿತಿ ನೀಡಿದರು. ಈ ಬಾರಿ ಅತಿವೃಷ್ಟಿಯಿಂದ ಹೆಜಮಾಡಿಯಲ್ಲಿ 30 ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಅದು ಸಹಿತ ಕಬ್ಬಿಣದ ಕಂಬಗಳನ್ನು ಬದಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗಾಂಜಾ ವಿರುದ್ಧ ಕ್ರಮಕ್ಕೆ ಆಗ್ರಹ: ಹೆಜಮಾಡಿ ಗ್ರಾಮ ವ್ಯಾಪ್ತಿಯಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆ ಅಧಿಕವಾಗುತ್ತಿದ್ದು, ಎಳೆಯರೇ ಅಧಿಕ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಪ್ರತಿ ವರ್ಷ ದೂರು ನೀಡಿದರೂ ಪ್ರಯೋಜನವಿಲ್ಲ. ಅದರ ಮಾರಾಟಗಾರರ ವಿರುದ್ಧ ಕ್ರಮಕ್ಕೆ ಪಡುಬಿದ್ರಿ ಪೋಲೀಸ್ ಠಾಣೆಯ ಎಎಸ್‍ಐ ಸುರೇಶ್ ಶೆಟ್ಟಿಯವರನ್ನು ಆಗ್ರಹಿಸಲಾಯಿತು.ಈ ಬಗ್ಗೆ ಇಲಾಖೆ ಮಾಹಿತಿ ಕಲೆ ಹಾಕಿದ್ದು, ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೆಜಮಾಡಿ ಬಸ್ಸು ನಿಲ್ದಾಣ ಹಾಗೂ ಕೋಡಿ ರಸ್ತೆಯಲ್ಲಿ ಅಪ್ರಾಪ್ತರು ಹೆಲ್ಮೆಟ್ ರಹಿತವಾಗಿ ಬೈಕ್ ಸವಾರಿ ಮಾಡುವ ಬಗ್ಗೆ ಗಮನ ಸೆಳೆದು ಈ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಯಿತು.

ಹೆಜಮಾಡಿಯ ಬೀಚ್‍ನಲ್ಲಿ ದೂರದ ಊರುಗಳಿಂದ ಆಗಮಿಸಿದ ಅಪರಿಚಿತರು ಮುಂಜಾನೆವರೆಗೆ ಕುಳಿತು ಮಜಾ ಮಾಡುತ್ತಿದ್ದು, ಸ್ಥಳೀಯರಿಗೆ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ಪೋಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಮಳೆಗಾಲದ ಆರಂಭದಲ್ಲಿ ಮುಟ್ಟಳಿವೆಯಲ್ಲಿ ಲಕ್ಷಾಂತರ ಮೀನುಗಳ ಮಾರಣಹೋಮ ನಡೆದಿದ್ದು, ಇಲಾಖಾಧಿಕಾರಿಗಳು ಈ ಬಗ್ಗೆ ಕಾರಣ ತಿಳಿಸಿದ್ದಾರೆಯೇ ಎಂದು ಪ್ರಶ್ನಿಸಲಾಯಿತು. ಮೀನುಗಾರಿಕೆ ಮತ್ತು ಪರಿಸರ ಇಲಾಖಾಧಿಕಾರಿಗಳ ಅನುಪಸ್ಥಿತಿಯಿಂದ ಸೂಕ್ತ ಉತ್ತರ ದೊರೆಯಲಿಲ್ಲ.

ಶಾಂಭವಿ ಹೊಳೆಯಲ್ಲಿ ಅಪರಿಚಿತ ವಾಹನಗಳಲ್ಲಿ ಕೋಳಿ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವ ಬಗ್ಗೆ ಅಧಿಕಾರಿಗಳ ಗಮನ ಸೆಳೆದು ಸೂಕ್ತ ಕ್ರಮಕ್ಕೆ ಆಗ್ರಹಿಸಲಾಯಿತು. ವಾಹನಗಳ ನಂಬ್ರ ಗುರುತಿಸಿ ಮಾಹಿತಿ ನೀಡುವಂತೆ ವಿನಂತಿಸಲಾಯಿತು.
ಪಡುಬಿದ್ರಿ ಸಾರ್ವಜನಿಕ ವಿದ್ಯಾರ್ಥಿ ನಿಲಯ ಬಳಿ ದುರ್ವಾಸನೆಯುಕ್ತ ತ್ಯಾಜ್ಯಗಳ ರಾಶಿಯಿಂದ ಅಲ್ಲಿನ ವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಪಕ್ಕದಲ್ಲೇ ಪೋಲೀಸ್ ಠಾಣೆ, ಆಸ್ಪತ್ರೆ, ಸರಕಾರಿ ಶಾಲೆ, ವಾರದ ಸಂತೆ ಇದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಶೇಖರ್ ಹೆಜ್ಮಾಡಿ ಆಗ್ರಹಿಸಿದರು.

ಮಾತೃಪೂರ್ಣ ಯೋಜನೆ ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ಅದನ್ನು ರದ್ದುಪಡಿಸಿ ಬಾಣಂತಿಯರ ಕಿಟ್ ನೀಡುವ ಯೋಜನೆಯನ್ನು ಜಾರಿಗೊಳಿಸಬೇಕೆಂದು ಸದಸ್ಯ ಪ್ರಣೇಶ್ ಹೆಜ್ಮಾಡಿ ಆಗ್ರಹಿಸಿದರು. ನಿರ್ಗತಿಕ ಮಹಿಳೆಯರನ್ನು ಸರಕಾರವೇ ಗುರುತಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶಕುಂತಳಾ ಉತ್ತರಿಸಿ ಈ ಬಗ್ಗೆ ಇಲಾಖೆ ವತಿಯಿಂದ ಸೂಕ್ತ ಕ್ರಮದ ಭರವಸೆ ನೀಡಿದರು.
ಎಲ್ಲೆಂದರಲ್ಲಿ ಕಸ ಬಿಸಾಡುವವರ ವಿರುದ್ಧ ಗ್ರಾಪಂ ಕಠಿಣ ಕ್ರಮ ಕೈಗೊಳ್ಳಲಿದ್ದು, ಕಸ ಬಿಸಾಡಿದವರ ಬಗ್ಗೆ ಮಾಹಿತಿ ನೀಡಿದಲ್ಲಿ ರೂ. 5000 ದಂಡ ವಿಧಿಸಲಾಗುವುದು. ಮಾಹಿತಿ ನೀಡಿದವರಿಗೆ ರೂ.1000 ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಲಾಯಿತು.

ಇತ್ತೀಚೆಗೆ ಇಸ್ರೇಲ್‍ಗೆ ಕೃಷಿ ಸಂಬಂಧಿ ಪ್ರವಾಸ ಹೋಗಿ ಬಂದ ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ವೈ.ಸುಧೀರ್ ಕುಮಾರ್, ಅಲ್ಲಿನ ವೈಜ್ಞಾನಿಕ ಕೃಷಿ, ನೀರಿನ ಸದ್ಬಳಕೆ, ಜಾಗತಿಕ ಮಾರುಕಟ್ಟೆಗಳ ಬಗ್ಗೆ ವಿಸ್ತøತ ಮಾಹಿತಿ ನೀಡಿದರು.
ಶಾಂಭವಿ ಸೇತುವೆ ಬಳಿ ಬಸ್ಸು ನಿಲ್ದಾಣಕ್ಕಾಗಿ ಅಲ್ಲಿನ ವಾಸಿಗಳು ಆಗ್ರಹಿಸಿದರು.
ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಯು.ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುಧಾಕರ ಕರ್ಕೇರ, ನೋಡೆಲ್ ಅಧಿಕಾರಿ ಬಿಇಒ ಮಂಜುಳಾ ಕೆ., ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಪಂ ಸದಸ್ಯೆ ರೇಣುಕಾ ಪುತ್ರನ್ ಉಪಸ್ಥಿತರಿದ್ದರು.

ಅರಣ್ಯ ಇಲಾಖೆಯ ನಾಗೇಶ್ ಬಿಲ್ಲವ, ತೋಟಗಾರಿಕಾ ಇಲಾಖೆಯ ಶ್ವೇತಾ ಹಿರೇಮಠ, ಆರೋಗ್ಯ ಇಲಾಖೆಯ ಡಾ. ಬಿ.ಬಿ.ರಾವ್, ಪಶು ಸಂಗೋಪನಾ ಇಲಾಖೆಯ ಡಾ. ನವೀನ್‍ಕುಮಾರ್ ಟಿ.ಜೆ., ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಉಪನ್ಯಾಸಕಿ ಶ್ರೇಯಾ ಇಲಾಖಾ ಮಾಹಿತಿ ನೀಡಿದರು. ಪಿಡಿಒ ಮಮತಾ ವೈ.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಲೆಕ್ಕ ಪರಿಶೋಧಕಿ ರಜನಿ ವರದಿ ಮಂಡಿಸಿದರು.