ಅಂತರ್ ಜಿಲ್ಲಾ ವಾಹನ ಸಂಚಾರ

ಪಾಸ್ ರಹಿತ ಓಡಾಟಕ್ಕೆ ಅವಕಾಶವಿಲ್ಲ-ಮಧ್ಯಾಹ್ನದ ಬಳಿಕ ಅವಕಾಶ
ಪಡುಬಿದ್ರಿ: ಅಂತರ್ ಜಿಲ್ಲಾ ಸಂಚಾರಕ್ಕೆ ಸ್ವಂತ ವಾಹನಗಳಲ್ಲಿ ತೆರಳಲು ಪಾಸ್ ಅಗತ್ಯವಿಲ್ಲ ಎಂಬ ಸರ್ಕಾರದ ಆದೇಶದಂತೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗೆ ತೆರಳುವ ಜನರಿಗೆ ಪಾಸ್ ಇಲ್ಲದೆ ಹೆಜಮಾಡಿ ಗಡಿಯಲ್ಲಿನ ಎರಡೂ ತಪಾಸಣಾ ಕೇಂದ್ರದಲ್ಲಿ sಸಿಬ್ಬಂದಿ ಮುಂದೆ ಸಂಚರಿಸಲು ಮಂಗಳವಾರ ಅವಕಾಶ ನಿರಾಕರಿಸಿದರು.
ಮಾಧ್ಯಮಗಳಲ್ಲಿ ಬಂದ ವರದಿಯಾಧರಿಸಿ ಬಂದ ನೂರಾರು ಜನರು ಗಡಿಯಲ್ಲಿನ ತಪಾಸಣಾ ಕೇಂದ್ರದ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೆಲ ಅಗತ್ಯ ಸಂಚಾರಕ್ಕೆ ಮಾನವೀಯತೆ ನೆಲೆಯಲ್ಲಿ ಅವಕಾಶ ಕಲ್ಪಿಸಿದ ಸಿಬ್ಬಂದಿ ಉಳಿದಂತೆ ಶೇ80 ರಷ್ಟು ಜನರಿಗೆ ವಿಷಯ ಮನವರಿಕೆ ಮಾಡಿ ಹಿಂದಕ್ಕೆ ಕಳುಹಿಸಿದರು.

ಈ ಬಗ್ಗೆ ಮೇಲಾಧಿಕಾರಿಗಳಲ್ಲಿ ವಿಚಾರಿಸಿದಾಗ ಪಾಸ್ ಇಲ್ಲದೆ ಸಂಚಾರಕ್ಕೆ ನಮಗೆ ಯಾವುದೇ ಆದೇಶ ಬಂದಿಲ್ಲ. ಪಾಸ್ ಇಲ್ಲದೆ ಸಂಚರಿಸಲು ಅವಕಾಶ ನೀಡುವುದಿದ್ದಲ್ಲಿ ತಪಾಸಣಾ ಕೆಂದ್ರದ ಅಗತ್ಯತೆ ಇದೆಯೇ. ಅನ್ಯ ರಾಜ್ಯಗಳಿಂದ ಜನ ಪಾಸ್ ಇದೆ ಎಂದು ಸಂಚರಿಸಿದರೆ ಮುಂದಾಗುವ ಅನಾಹುತಕ್ಕೆ ಯಾರು ಹೊಣೆ. ವಾಣಿಜ್ಯ, ಸಂಸ್ಥೆ, ಕಂಪೆನಿ ಪತ್ರ ಮತ್ತು ಗುರುತು ಚೀಟಿಯಿರುವ ಉದ್ಯೋಗಿಗಳಿಗೆ ಮಾತ್ರ ಸಂಚರಿಸಲು ಅವಕಾಶವಿದೆ ಎಂದಿದ್ದಾರೆ.

ಆದರೆ ಮಧ್ಯಾಹ್ನದ ಬಳಿಕ ಪಾಸ್ ರಹಿತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಆರೋಗ್ಯ ತಪಾಸಣೆ ಮತ್ತು ಐಡಿ ಕಾರ್ಡ್ ಕಡ್ಡಾಯ ಕಡ್ಡಾಯಗೊಳಿಸಲಾಗಿದೆ ಎಂದು ಮೂಲ್ಕಿ ತಹಶೀಲ್ದಾರ್ ಮಾಣಿಕ್ಯ ಎಮ್ ತಿಳಿಸಿದ್ದಾರೆ.